ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಉಲ್ಬಣಗೊಂಡಿದ್ದು, 8 ಮಂದಿ ಮೃತಪಟ್ಟಿದ್ದಾರೆ. 23 ಜಿಲ್ಲೆಗಳ 11.50 ಲಕ್ಷ ಜನರು ಬಾಧಿತ ರಾಗಿದ್ದಾರೆ. ಬ್ರಹ್ಮಪುತ್ರ ಮತ್ತು ಅದರ ಉಪನದಿಗಳು ಸೇರಿದಂತೆ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ವರದಿಯೊಂದು ತಿಳಿಸಿದೆ.
ಪ್ರಸಕ್ತ ವರ್ಷದಲ್ಲಿ ಚಂಡಮಾರುತ, ಭೂಕುಸಿತ, ಪ್ರವಾಹದಲ್ಲಿ ಸಿಲುಕಿ ಮೃತಪಟ್ಟವರ ಸಂಖ್ಯೆ 48ಕ್ಕೇರಿದೆ.
ಗೋಲಾಘಾಟ್ ಜಿಲ್ಲೆಯ ಪ್ರವಾಹ ಪೀಡಿತ ಪ‍್ರದೇಶಕ್ಕೆ ಮಂಗಳವಾರ ಭೇಟಿ ನೀಡಿದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ಸಂಕಷ್ಟಕ್ಕೀಡಾದ ಜನರೊಟ್ಟಿಗೆ ಚರ್ಚಿಸಿದರು. ಸಂತ್ರಸ್ತರಿಗೆ ತಕ್ಷಣವೇ ಪರಿಹಾರ ವಿತರಿಸಲು ಹಾಗೂ ಪುನರ್‌ವಸತಿ ಕಲ್ಪಿಸುವ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಲಖಿಂಪುರದಲ್ಲಿ 1.65 ಲಕ್ಷ ಜನರು ಸಂಕಷ್ಟಕ್ಕೀಡಾಗಿದ್ದರೆ, ದರ್ರಾಂಗ್‌ನಲ್ಲಿ 1.47 ಲಕ್ಷ, ಗೋಲಾಘಾಟ್‌ನಲ್ಲಿ 1.07 ಲಕ್ಷ ಮಂದಿ ನೆರೆಯ ಅಬ್ಬರಕ್ಕೆ ತತ್ತರಿಸಿದ್ದಾರೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವೂ ಪ್ರವಾಹದಿಂದ ಪೀಡಿತವಾಗಿದೆ.
ಉದ್ಯಾನದ ಪರಿಸ್ಥಿತಿಯನ್ನು ವೀಕ್ಷಿಸಿದ ಮುಖ್ಯಮಂತ್ರಿಯು, ವನ್ಯಜೀವಿಗಳಿಗೆ ತೊಂದರೆಯಾಗದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಯಂತ್ರಿಸುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸ್ಥಳೀಯ ಆಡಳಿತ, ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ತುತ್ತು ಸೇವೆಗಳು ಮತ್ತು ವಾಯುಪಡೆಯು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಸಿವೆ. ವಿವಿಧ ಜಿಲ್ಲಾಡಳಿತಗಳು ಸ್ಥಾಪಿಸಿರುವ 490 ಪರಿಹಾರ ಶಿಬಿರಗಳಲ್ಲಿ 2.90 ಲಕ್ಷ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ.
ಪ್ರವಾಹದಿಂದ ಒಡ್ಡುಗಳು, ರಸ್ತೆಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳು ಹಾನಿಗೊಳಗಾಗಿವೆ ಎಂದು ವರದಿ ತಿಳಿಸಿದೆ.
ಇಟಾನಗರ ವರದಿ:
ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಅರುಣಾಚಲ ಪ್ರದೇಶದಲ್ಲೂ ಪ್ರವಾಹ ಪರಿಸ್ಥಿತಿ ಬಿಗಡಾಯಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಸಾಯಿ, ಲೋಹಿತ್, ಚಾಂಗ್ಲಾಂಗ್ ಮತ್ತು ಪೂರ್ವ ಸಿಯಾಂಗ್ ಜಿಲ್ಲೆಗಳು ನೆರೆಯಿಂದ ನಲುಗಿದ್ದರೆ, ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಇತರ ಜಿಲ್ಲೆಗಳಲ್ಲಿ ಭೂಕುಸಿತ ಸಂಭವಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಪಾಪುಲ್ ಪಾರೆ ಜಿಲ್ಲೆಯ ಸಗಲೀಯಲ್ಲಿ ಮೇಘ ಸ್ಫೋಟ ಸಂಭವಿಸಿದೆ. ಪಾರೆ ಜಲವಿದ್ಯುತ್ ಯೋಜನೆಯಿಂದ ಅಪಾರ ಪ್ರಮಾಣದ ನೀರನ್ನು ಹೊರ ಬಿಡಲಾಗಿದ್ದು, ಜಿಲ್ಲಾಡಳಿತವು ಸ್ಥಳೀಯರಿಗೆ ಮುನ್ನೆಚ್ಚರಿಕೆ ನೀಡಿದೆ.
ಬುರ್ಹಾ ದೆಹಿಂಗ್ ನದಿಯು ಉಕ್ಕೇರಿದ್ದು, ವಿವಿಧ ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿಸಿದೆ. ಪ್ರವಾಹ ಮತ್ತು ಭೂಕುಸಿತದಿಂದ ರಾಜ್ಯದಾದ್ಯಂತ 61,048 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಾಂಗ್ಲಾಂಗ್ ಮತ್ತು ನಮ್ಸಾಯಿ ಜಿಲ್ಲೆಗಳಲ್ಲಿನ ಪರಿಹಾರ ಶಿಬಿರಗಳಿಗೆ 300 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಗಲೀಯಲ್ಲಿ ಮೇಘ ಸ್ಫೋಟ ವಿವಿಧೆಡೆ ಪರಿಹಾರ ಶಿಬಿರಗಳ ಆರಂಭ ರಕ್ಷಣಾ ಕಾರ್ಯಾಚರಣೆ ಚುರುಕು
- ಮಣಿಪುರದಲ್ಲಿ ಭಾರಿ ಮಳೆ: ಶಾಲಾ-ಕಾಲೇಜುಗಳಿಗೆ ರಜೆ ಇಂಫಾಲ (ಪಿಟಿಐ): ಮಣಿಪುರದ ಪಶ್ಚಿಮ ಇಂಫಾಲ ಹಾಗೂ ಪೂರ್ವ ಇಂಫಾಲ ಜಿಲ್ಲೆಯ ವಿವಿಧೆಡೆ ನಿರಂತರ ಮಳೆಯಾಗಿದ್ದು ಎರಡು ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಬುಧವಾರ ಎಲ್ಲ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿದೆ. ಪ್ರವಾಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಗುರುವಾರದವರೆಗೂ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಇಂಫಾಲ್ ಹಾಗೂ ಇರಿಲ್ ನದಿಗಳು ವಿವಿಧೆಡೆ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದಾಗಿ ಅಪಾರ ಪ್ರಮಾಣದ ನೀರು ವಸತಿ ಪ್ರದೇಶಗಳಿಗೆ ನುಗ್ಗಿದೆ. ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.