ಬಾಯಿ ಸಿಹಿ ಮಾಡಿಕೊಳ್ಳುವುದಕ್ಕೆ (Sugar Eating) ಕಾರಣಗಳನ್ನು ಹುಡುಕುವುದೇ ಬೇಡ, ತಾವಾಗಿಯೇ ಸೃಷ್ಟಿಯಾಗುತ್ತವೆ. ಇನ್‌ಸ್ಟಾದಲ್ಲಿ ಹೆಚ್ಚಿನ ಲೈಕ್ ಸಿಕ್ಕಿದ್ದರಿಂದ ಹಿಡಿದು ಶುರುವಾಗುವ ಕಾರಣಗಳು, ಸಂಖ್ಯೆಯಲ್ಲಿ ನೂರಾರು ಇರಬಹುದು. ಜೀವನವಿಡೀ ಸಂಭ್ರಮಿಸಬಹುದು ಎಂಬ ಸಮಾಧಾನದ ಜೊತೆಗೆ, ಅದೇ ನೆವದಲ್ಲಿ ಜೀವನವಿಡೀ ಸಿಹಿ ತಿನ್ನುತ್ತಲೇ ಇರುತ್ತೇವೆ ಎಂಬುದು ಆತಂಕಕ್ಕೂ ಕಾರಣವಾಗುತ್ತವೆ.
ಪ್ರಮಾಣವೆಷ್ಟು?
ಇದನ್ನು ಮೊದಲು ತಿಳಿಯಬೇಕು ನಾವು. ಆಗ ತಿಂದಿದ್ದೆಷ್ಟು ಎಂಬುದು ಅಂದಾಜಾಗಬಹುದು ನಮಗೆ. ದಿನವೊಂದಕ್ಕೆ ಮಹಿಳೆಯರು ಮತ್ತು 2 ವರ್ಷಕ್ಕೆ ಮೇಲ್ಪಟ್ಟ ಮಕ್ಕಳು ನೂರು ಕ್ಯಾಲರಿಗಿಂತ ಹೆಚ್ಚು ಸಕ್ಕರೆಯನ್ನು ತಿನ್ನುವಂತಿಲ್ಲ. ಇದು ಹಣ್ಣುಗಳಲ್ಲಿರುವ ನೈಸರ್ಗಿಕ ಸಕ್ಕರೆಯಂಶದ ಹೊರತಾಗಿ ಹೆಚ್ಚುವರಿ ಸೇರಿಸಿದ ಸಕ್ಕರೆ ಪ್ರಮಾಣ. ಇನ್ನೂ ಸರಿಯಾಗಿ ಹೇಳುವುದಾದರೆ, 6 ಟೀ ಚಮಚ ಸಕ್ಕರೆಯನ್ನು ಮೀರಿವಂತಿಲ್ಲ. ಪುರುಷರು 150 ಕ್ಯಾಲರಿ, ಅಂದರೆ 9 ಟೀ ಚಮಚ ಸಕ್ಕರೆಯನ್ನು ಮೀರುವಂತಿಲ್ಲ. 2 ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ನೈಸರ್ಗಿಕ ಸಕ್ಕರೆಯಂಶ ಮಾತ್ರವೇ ಸಾಕು, ಹೆಚ್ಚುವರಿ ಬೇಡವೇ ಬೇಡ ಎನ್ನುವುದು ತಜ್ಞರ ಅಭಿಪ್ರಾಯ. ಆದರೆ ನಮ್ಮಲ್ಲಿ ವರ್ಷದೊಳಗಿನ ಮಕ್ಕಳಿಗೇ ಕ್ಯಾಂಡಿ, ಚಾಕಲೇಟ್, ಐಸ್‌ಕ್ರೀಮ್, ಸೋಡಾ ಮುಂತಾದ ಹಾಳುಮೂಳನ್ನೆಲ್ಲ ರುಚಿ ತೋರಿಸಿ ಆಗಿರುತ್ತದೆ ನಮಗೆ!
ತೂಕ ಹೆಚ್ಚಳ
ಇದು ಮೊದಲ ಸೂಚನೆ. ತೂಕ ಇದ್ದಕ್ಕಿದ್ದಂತೆ ಹೆಚ್ಚುತ್ತಿದೆ ಎಂದಾದರೆ ಸೋಡಾ, ಫ್ರೂಟ್‌ಜ್ಯೂಸ್ ಸೇರಿದಂತೆ ಹೆಚ್ಚುವರಿ ಸಕ್ಕರೆಯನ್ನೆಷ್ಟು ಸೇವಿಸುತ್ತಿದ್ದೀರಿ ಎಂಬುದನ್ನು ಮೊದಲು ನೋಡಿ. ಕಾರಣ, ಸಕ್ಕರೆಯನ್ನು ಹೆಚ್ಚು ತಿಂದಷ್ಟೂ ಹಸಿವೆ ಹೆಚ್ಚುತ್ತದೆ. ತಿಂದ ತಕ್ಷಣ ಹೆಚ್ಚು ಶಕ್ತಿ ಬಂದಂತೆ ಭಾಸವಾದರೂ, ಆ ಸಕ್ಕರೆಯಂಶ ಹೆಚ್ಚು ಸಮಯದವರೆಗೆ ದೇಹಕ್ಕೆ ಶಕ್ತಿಯನ್ನು ಕೊಡಲಾರದು. ಪ್ರೊಟೀನ್, ಸಂಕೀರ್ಣ ಪಿಷ್ಟಗಳು ಅಥವಾ ನಾರುಗಳು ದೀರ್ಘ ಕಾಲದವರೆಗೆ ದೇಹಕ್ಕೆ ಶಕ್ತಿಯನು ನೀಡುತ್ತಲೇ ಇರುತ್ತವೆ. ಆದರೆ ಸಕ್ಕರೆ ಹಾಗಲ್ಲ, ಏರಿದಷ್ಟೇ ಬೇಗ ಇಳಿಯುತ್ತದೆ ಇದರ ಶಕ್ತಿ. ಮತ್ತೆ ಹಸಿವೆ, ಮತ್ತೆ ತಿನ್ನು, ತೂಕ ಏರು… ಚಕ್ರ ಮುಂದುವರಿಯುತ್ತದೆ.
ಹಸಿವೆ ಹೆಚ್ಚು
ಅದೂ ಸಿಹಿಯನ್ನೇ ಮತ್ತೆ ಮತ್ತೆ ಬಯಸುತ್ತದೆ ದೇಹ! ಇದಕ್ಕೆ ಕಾರಣಗಳು ಇಲ್ಲದಿಲ್ಲ. ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಗಳ ನಾಡಿನಲ್ಲಿ ಒಳ್ಳೆಯವೂ ಇವೆ, ಕೆಟ್ಟವೂ ಇವೆ. ಸಕ್ಕರೆಯಂಶ ಸಲ್ಲುವುದು ಕೆಟ್ಟ ಬ್ಯಾಕ್ಟೀರಿಯಗಳಿಗೆ. ಅವುಗಳಿಗೆ ಅಹಾರ ದೊರೆಯುತ್ತಿದ್ದಂತೆ, ಅವುಗಳ ಸಂಖ್ಯೆ ಹೆಚ್ಚಿ, ಮತ್ತೆ ಅದದೇ ಆಹಾರವನ್ನೇ ಹೊಟ್ಟೆ ಕೇಳತೊಡಗುತ್ತದೆ. ಹೆಚ್ಚು ಸಕ್ಕರೆ ತಿಂದಷ್ಟೂ ಹಸಿವೆ ಹೆಚ್ಚು… ಸರಣಿ ಮುಂದುವರಿಯುತ್ತಲೇ ಹೋಗುತ್ತದೆ.
ಮೊಡವೆ
ಸಕ್ಕರೆಯಂಶ ಹೆಚ್ಚಾದರೆ ಆಂಡ್ರೋಜೆನ್ ಚೋದಕದ ಪ್ರಮಾಣ ದೇಹದಲ್ಲಿ ಹೆಚ್ಚುತ್ತದೆ. ಇದು ಚರ್ಮದ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಮೊಡವೆ, ಚರ್ಮ ಸುಕ್ಕಾಗುವುದು, ಹೊಳಪು ಕಳೆದುಕೊಳ್ಳುವುದು, ಎಕ್ಸಿಮಾ ಮುಂತಾದ ಚರ್ಮದ ತೊಂದರೆಗಳು ಹೆಚ್ಚಿದರೆ, ಆಹಾರದಲ್ಲಿ ಸಕ್ಕರೆಯಂಶ ಹೆಚ್ಚಿದೆಯೇ ಎಂಬುದನ್ನು ಪರಿಶೀಲಿಸುವುದು ಒಳಿತು.
ಕಿರಿಕಿರಿ
ಆಗಾಗ ಮೂಡ್ ಬದಲಾಗುತ್ತಿದೆಯೇ? ಒಮ್ಮೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಿದ್ದರೆ, ಇನ್ನೊಮ್ಮೆ ನರಕದ ಬಾಗಿಲಲ್ಲಿ ಇದ್ದ ಅನುಭವವೇ? ಸಿಟ್ಟು, ಅಶಾಂತಿ, ಆತಂಕ ಮುಂತಾದ ಮಾನಸಿಕ ಕಿರಿಕಿರಿಗಳು ಹೆಚ್ಚಾಗಿವೆಯೇ? ಸಿಹಿ ತಿಂದಿದ್ದು ಹೆಚ್ಚಾಗಿರಬೇಕು. ದೇಹದಲ್ಲಿ ಸಕ್ಕರೆಯಂಶ ತೀವ್ರವಾಗಿ ಏರಿಳಿಯುತ್ತಿರುವುದ ಸೂಚನೆಯಿರಬಹುದು ಇವೆಲ್ಲ. ಸಕ್ಕರೆಯಂಶ ಸಾಮಾನ್ಯ ಸ್ಥಿತಿಯಲ್ಲಿ ಇದ್ದರಷ್ಟೇ ಮೆದುಳು ಸುಸ್ಥಿರವಾಗಿ ಕೆಲಸ ಮಾಡಬಲ್ಲದು.