ನವದೆಹಲಿ: ತಂಬಾಕು ಸೇವನೆಯ ದುಷ್ಪರಿಣಾಮಗಳನ್ನು ಎದುರಿಸಲು ಮತ್ತು ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸಲು ದೇಶದ ಎಲ್ಲ ವೈದ್ಯಕೀಯ ಕಾಲೇಜುಗಳು 'ತಂಬಾಕು ನಿಯಂತ್ರಣ ಕೇಂದ್ರ'ಗಳನ್ನು ಸ್ಥಾಪಿಸಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ನಿರ್ದೇಶಿಸಿದೆ.
ತಂಬಾಕು ನಿಯಂತ್ರಣಕ್ಕೆ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ವಿಶೇಷ ಸೇವೆಗಳನ್ನು ಸಂಯೋಜಿಸುವ ಮೂಲಕ ಆರೋಗ್ಯ ಮೂಲಸೌರ್ಕಯವನ್ನು ಬಲಪಡಿಸುವ ಉದ್ದೇಶವನ್ನು ಇದು ಹೊಂದಿದೆ ಎಂದು ಎನ್‌ಎಂಸಿ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.
ವೈದ್ಯಕೀಯ ಕಾಲೇಜುಗಳ ಜತೆ ಸಂಯೋಜನೆ ಹೊಂದಿರುವ ಎಲ್ಲ ಆಸ್ಪತ್ರೆಗಳು 'ತಂಬಾಕು ನಿಯಂತ್ರಣ ಕೇಂದ್ರ'ಗಳನ್ನು ಹೊಂದಿರಬೇಕು. ಇದು ಮನೋವೈದ್ಯಕೀಯ ವಿಭಾಗ ಅಥವಾ ಇತರ ವಿಭಾಗಗಳು ನಡೆಸುವ ವಿಶೇಷ ಕ್ಲಿನಿಕ್ ಆಗಿರಬಹುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ವೈದ್ಯಕೀಯ ಕಾಲೇಜುಗಳು ತರಬೇತಿಗಾಗಿ ಗುರುತಿಸಿಕೊಂಡಿರುವ ಗ್ರಾಮೀಣ ಮತ್ತು ನಗರ ಆರೋಗ್ಯ ಕೇಂದ್ರಗಳಲ್ಲೂ ಈ ಕೇಂದ್ರಗಳನ್ನು ಸ್ಥಾಪಿಸಿರಬೇಕು. ಈ ಕೇಂದ್ರಗಳು ತಂಬಾಕು ನಿಯಂತ್ರಣದ ಜತೆಗೆ ಮಾದಕ ವ್ಯಸನ ನಿಯಂತ್ರಣ ಕೇಂದ್ರಗಳಾಗಿಯೂ ಕಾರ್ಯ ನಿರ್ವಹಿಸಲಿವೆ ಎಂದು ಎನ್‌ಎಂಸಿ ತಿಳಿಸಿದೆ.
2016-17ರ ಸಮೀಕ್ಷೆಯ ಪ್ರಕಾರ ಭಾರತವು ಜಗತ್ತಿನಲ್ಲಿಯೇ ಎರಡನೇ ಅತಿ ದೊಡ್ಡ ಸಂಖ್ಯೆಯ ತಂಬಾಕು ಬಳಕೆದಾರರನ್ನು ಹೊಂದಿರುವ ದೇಶವಾಗಿದೆ. ಇಲ್ಲಿನ 26.8 ಕೋಟಿ ಜನರು ಅಥವಾ ದೇಶದ ವಯಸ್ಕರಲ್ಲಿ ಶೇ 28.6ರಷ್ಟು ಜನರು ತಂಬಾಕು ಬಳಸುತ್ತಾರೆ. ಇವರಲ್ಲಿ ತಂಬಾಕು ಸಂಬಂಧಿತ ರೋಗಗಳಿಂದ ಪ್ರತಿ ವರ್ಷ 12 ಲಕ್ಷ ಜನರು ಮೃತಪಡುತ್ತಿದ್ದಾರೆ. ದೇಶದ ಕ್ಯಾನ್ಸರ್‌ಗಳ ಪೈಕಿ ಶೇ 27ರಷ್ಟು ತಂಬಾಕು ಸೇವನೆ ಕಾರಣದಿಂದ ಉಂಟಾಗುತ್ತಿವೆ.