ನವದೆಹಲಿ: ಇತ್ತೀಚಿನ ದಿನಗಳಲ್ಲಿ ಕೋಚಿಂಗ್ ಸೆಂಟರ್‌ಗಳು ಗ್ಯಾಸ್ ಚೇಂಬರ್‌ಗಳಾಗಿ ಕಾಣಿಸುತ್ತಿವೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಭಾರಿ ಮಳೆಯಿಂದಾಗಿ ದೆಹಲಿಯ ರಾವುಸ್ ಕೋಚಿಂಗ್ ಸೆಂಟರ್‌ನಲ್ಲಿ ಮೂವರು ಐಎಎಸ್ ಆಕಾಂಕ್ಷಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ವೇಳೆ ಧನಕರ್ ಅವರು ಈ ಬೇಸರ ವ್ಯಕ್ತಪಡಿಸಿದರು.
ಘಟನೆಯಲ್ಲಿ ಉತ್ತರ ಪ್ರದೇಶದ ಶ್ರೇಯಾ ಯಾದವ್, ತೆಲಂಗಾಣದ ತಾನ್ಯಾ ಸೋನಿ ಹಾಗೂ ಕೇರಳದ ನವೀನ್ ದಾಲವೀನ್ ಮೃತರಾಗಿದ್ದರು.
ಕೋಚಿಂಗ್ ಸೆಂಟರ್‌ಗಳು ಜ್ಞಾನ ನೀಡುವ ಬದಲು ವಾಣಿಜ್ಯೀಕರಣವಾಗಿವೆ. ವಿದ್ಯಾರ್ಥಿಗಳಿಂದ ಹಣ ಹೀರುವ ಇವರು ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿ ಮೆರೆಯುತ್ತಿದ್ದಾರೆ. ಇಂತಹ ಕಟ್ಟಡಗಳು ಸಾವಿನ ಮನೆಗಳ ರೀತಿ ಆಗಿವೆ ಎಂದು ಕಿಡಿಕಾರಿದರು.
ಕೇವಲ ಐಎಎಸ್ ಅಷ್ಟೇ ಉದ್ಯೋಗ ಅಲ್ಲ. ಸಾಕಷ್ಟು ದಾರಿಗಳು ಉದ್ಯೋಗ ಮಾಡಲು ಇವೆ ಎಂಬುದನ್ನು ಸಂಸದರು ಯುವಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಅವರು ಇದೇ ವೇಳೆ ಒತ್ತಾಯಿಸಿದರು.
ಎರಡು ದಿನಗಳ ಹಿಂದೆ ನಡೆದ ಘಟನೆಯ ಕುರಿತು ಎಂಸಿಡಿ, ದೆಹಲಿ ಸರ್ಕಾರ ಹಾಗೂ ದೆಹಲಿ ಪೊಲೀಸರು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಸಾವಿಗೆ ಕಾರಣಗಳನ್ನು ಅವಲೋಕಿಸಲಾಗುತ್ತಿದೆ.
ಹಳೆಯ ರಾಜಿಂದರ್ ನಗರದಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 13 ಕೋಚಿಂಗ್ ಸೆಂಟರ್‌ಗಳನ್ನು ಎಂಸಿಡಿ ಅಧಿಕಾರಿಗಳು ಮುಚ್ಚಿಸಿದ್ದಾರೆ. 'ಅಧಿಕಾರಿಗಳ ತಂಡವೊಂದು ಕೇಂದ್ರ ದೆಹಲಿಯಲ್ಲಿರುವ ಕೋಚಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಲಿದೆ' ಎಂದು ದೆಹಲಿ ಸರ್ಕಾರವು ಭಾನುವಾರ ಹೇಳಿತ್ತು.