ನವದೆಹಲಿ: 'ನೀಟ್-ಯುಜಿ 2024' ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಯಾವ ಮಟ್ಟದಲ್ಲಿ ನಡೆದಿದೆ ಎಂಬುದನ್ನು ಬಹಿರಂಗಪಡಿಸುವಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ (ಎನ್‌ಟಿಎ) ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶಿಸಿದ್ದು, ಸೋರಿಕೆಯು ಇಡೀ ಪ್ರಕ್ರಿಯೆ ಮೇಲೆ ಪರಿಣಾಮ ಬೀರಿದ್ದರೆ ಮರುಪರೀಕ್ಷೆಗೆ ಆದೇಶಿಸಬೇಕಾಗುತ್ತದೆ ಎಂದು ಹೇಳಿತು.
ಪ್ರಶ್ನೆ ಪತ್ರಿಕೆ ಎಲ್ಲಿ, ಯಾವ ರೀತಿ ಸೋರಿಕೆಯಾಯಿತು ಮತ್ತು ಸೋರಿಕೆ ನಡೆದ ಸಮಯ ಹಾಗೂ ಪರೀಕ್ಷೆ ನಡೆದ ದಿನದ (ಮೇ 5, 2024) ನಡುವಿನ ಅವಧಿಯ ಬಗ್ಗೆ ಮಾಹಿತಿ ಒದಗಿಸುವಂತೆ ಎನ್‌ಟಿಎ ಮತ್ತು ಸಿಬಿಐಗೆ ಸೂಚಿಸಿತು.
'ಪರೀಕ್ಷಾ ಅಕ್ರಮದ ಫಲಾನುಭವಿಗಳನ್ನು ಮತ್ತು ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳನ್ನು ಪ್ರತ್ಯೇಕಿಸಲು ಸಾಧ್ಯವಾಗದಿದ್ದರೆ ಮರುಪರೀಕ್ಷೆ ನಡೆಸಬೇಕಾಗುತ್ತದೆ' ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿತು.
ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೇ 5ರಂದು ನಡೆದ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಇತರೆ ಅವ್ಯವಹಾರಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಆರಂಭಿಸಿತು. ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರು ಪೀಠದಲ್ಲಿದ್ದಾರೆ.
ಜೂನ್ 23ರಿಂದ ಇದುವರೆಗೆ ತನಿಖೆಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ವರದಿ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದ ಪೀಠ, ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ (ಜುಲೈ 11) ನಿಗದಿಪಡಿಸಿದೆ.
ಅರ್ಜಿದಾರರ ಪರ ವಕೀಲರು ಮತ್ತು ಕೇಂದ್ರ ಸರ್ಕಾರ ಹಾಗೂ ಎನ್‌ಟಿಎಯನ್ನು ಪ್ರತಿನಿಧಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದ ಆಲಿಸಿದ ಪೀಠ, 'ಮರುಪರೀಕ್ಷೆಯನ್ನು ನಡೆಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಮುನ್ನ ಕೆಲವೊಂದು ವಿಷಯಗಳನ್ನು ಖಚಿತಪಡಿಸಿಕೊಳ್ಳಬೇಕಿದೆ. ಪರೀಕ್ಷಾ ಅಕ್ರಮವು ವ್ಯವಸ್ಥಿತವಾಗಿ ನಡೆದಿದೆಯೇ, ಅಕ್ರಮವು ಸಂಪೂರ್ಣ ಪರೀಕ್ಷಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವ ಸ್ವರೂಪದ್ದಾಗಿದೆಯೇ ಎಂಬುದು ಸ್ಪಷ್ಟವಾಗಬೇಕಿದೆ' ಎಂದಿತು.
ಪರೀಕ್ಷಾ ಅಕ್ರಮದ ಫಲಾನುಭವಿಗಳನ್ನು ಗುರುತಿಸಲು ಸಾಧ್ಯವಾದರೆ ಮರುಪರೀಕ್ಷೆಯ ಅಗತ್ಯವಿರುವುದಿಲ್ಲ. 23 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸುವುದು ಕಷ್ಟಕರ ಎಂಬುದನ್ನು ಗಮನಿಸಬೇಕು. ಪ್ರಶ್ನೆ ಪತ್ರಿಕೆ ಸೋರಿಕೆಯು ಸಾಮಾಜಿಕ ಮಾಧ್ಯಮಗಳ ಮೂಲಕ ನಡೆದಿದ್ದರೆ, ಅದು ದೊಡ್ಡ ಮಟ್ಟದಲ್ಲೇ ಆಗಿರುತ್ತದೆ. ಟೆಲಿಗ್ರಾಂ ಮತ್ತು ವಾಟ್ಸ್‌ಆಯಪ್‌ನಲ್ಲಿ ಆಗಿದ್ದರೆ ಅದು ಕಾಳ್ಗಿಚ್ಚಿನಂತೆ ಹರಡಿರುತ್ತದೆ ಎಂಬುದನ್ನು ಪೀಠವು ಗಮನಿಸಿತು.
ಪ್ರಶ್ನೆ ಪತ್ರಿಕೆ ಸೋರಿಕೆ ಹೇಗಾಯಿತು ಎಂಬ ಕುರಿತ ತನಿಖಾ ವರದಿ ಒಳಗೊಂಡಂತೆ ಜುಲೈ 10ರ ಒಳಗಾಗಿ ಅಫಿಡವಿಟ್ ಸಲ್ಲಿಸುವಂತೆ ಎನ್‌ಟಿಎ, ಕೇಂದ್ರ ಸರ್ಕಾರ ಮತ್ತು ಸಿಬಿಐಗೆ ಪೀಠವು ನಿರ್ದೇಶಿತು.
ಪರೀಕ್ಷಾ ಅಕ್ರಮದಿಂದ ಪ್ರಯೋಜನ ಪಡೆದ ವಿದ್ಯಾರ್ಥಿಗಳನ್ನು ಪತ್ತೆಹಚ್ಚಲು ಸೈಬರ್ ವಿಧಿವಿಜ್ಞಾನ ಘಟಕದ ದತ್ತಾಂಶಗಳ ವಿಶ್ಲೇಷಣೆಯಿಂದ ಸಾಧ್ಯವೇ ಎಂಬುದನ್ನು ತಿಳಿಸುವಂತೆಯೂ ನಿರ್ದೇಶನ ನೀಡಿತು.
ನೀಟ್-ಯುಜಿ ಪರೀಕ್ಷೆಯ 'ಪಾವಿತ್ರ್ಯತೆ'ಯನ್ನು ಖಾತರಿಪಡಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ತಜ್ಞರನ್ನು ಒಳಗೊಂಡ ಸಮಿತಿ ರಚಿಸುವುದನ್ನು ಕೇಂದ್ರ ಸರ್ಕಾರ ಪರಿಗಣಿಸುವುದು ಅಗತ್ಯ ಎಂದು ಹೇಳಿತು.