ಮುಂಬೈ: ವರ್ಷಾಂತ್ಯದಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯಲು ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಪಕ್ಷವು ಸಜ್ಜಾಗಿದೆ.
ಈ ನಿರ್ಧಾರವು ಬಿಜೆಪಿ ನೇತೃತ್ವದ ಮಹಾಯುತಿ (ಎನ್‌ಡಿಎ) ಮೈತ್ರಿಕೂಟವನ್ನಷ್ಟೇ ಅಲ್ಲದೆ, ಮಹಾ ವಿಕಾಸ ಆಘಾಡಿ (ಇಂಡಿಯಾ) ಪಕ್ಷಗಳನ್ನೂ ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ.
ಗುರುವಾರ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿರುವ ರಾಜ್, ಎರಡೂ ಬಣಗಳ ವಿರುದ್ಧ ಕಿಡಿಕಾರಿದ್ದಾರೆ. ನಿರ್ಣಾಯಕ ಕದನಕ್ಕೆ ಮತ್ತು ಅಧಿಕಾರಕ್ಕೇರಲು ಸಜ್ಜಾಗುವಂತೆ ಮುಖಂಡರಿಗೆ ತಿಳಿಸಿದ್ದಾರೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೂ ಮುನ್ನ ಸೀಟು ಹಂಚಿಕೆ ಪ್ರಕ್ರಿಯೆಯು ಮಹಾಯುತಿ ಹಾಗೂ ಮಹಾ ವಿಕಾಸ ಆಘಾಡಿ ಬಣಗಳ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ, ರಾಜ್ ಪಕ್ಷ ಏಕಾಂಗಿ ಸ್ಪರ್ಧೆ ತೀರ್ಮಾನಿಸಿದೆ.
'ಮೈತ್ರಿ ಮಾಡಿಕೊಳ್ಳುತ್ತೇವೆಯೇ ಇಲ್ಲವೇ ಎಂಬ ಬಗ್ಗೆ ಯೋಚಿಸುವುದಿಲ್ಲ. ಸ್ವಂತ ಸಾಮರ್ಥ್ಯದ ಆಧಾರದಲ್ಲಿ 225 ಸ್ಥಾನಗಳಿಗೆ ಸ್ಪರ್ಧಿಸುತ್ತೇವೆ' ಎಂದು ರಾಜ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಾದ್ಯಂತ ಪ್ರವಾಸ ನಡೆಸಲು ಯೋಜಿಸಿರುವ ಅವರು, 'ಹವಾಮಾನ ಮತ್ತು ಮಾನ್ಸೂನ್ ಪರಿಸ್ಥಿತಿಯನ್ನು ಆಧರಿಸಿ ಆಗಸ್ಟ್ 1ರಿಂದ ಪ್ರವಾಸ ಆರಂಭಿಸುತ್ತೇನೆ' ಎಂದಿದ್ದಾರೆ.
ಜಯದ ಸಾಧ್ಯತೆಯನ್ನು ಗಮನದಲ್ಲಿರಿಸಿ ಸೀಟು ಹಂಚಿಕೆ ಮಾಡಲಾಗುವುದು ಎಂದೂ ಹೇಳಿದ್ದಾರೆ.
ಎಂಎನ್‌ಎಸ್ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ -ಎಸ್‌ಪಿ), ರಾಜ್ ಠಾಕ್ರೆ ಯಾವಾಗ ತಮ್ಮ ನಿಲುವು ಬದಲಿಸುತ್ತಾರೆ ಎಂಬುದು ಅವರ ಕುಟುಂಬದವರಿಗೂ ಗೊತ್ತಿಲ್ಲ ಎಂದಿದೆ.