ಕಾಸರಗೋಡು: ಆಸ್ಪತ್ರೆ ಜನರೇಟರ್‍ನಿಂದ ಹೊರಸೂಸುತ್ತಿದ್ದ ಹೊಗೆಯಿಂದ ಆಸ್ಪತ್ರೆ ಸನಿಹ ಚಟುವಟಿಕೆ ನಡೆಸುತ್ತಿದ್ದ ಶಾಲಾ ಮಕ್ಕಳು ಅಸೌಖ್ಯಗೊಂಡು ಆಸ್ಪತ್ರೆ ದಾಖಲಾದ ಘಟನೆ ಖಂಡಿಸಿ ಕಾಞಂಗಾಡು ನಗರಸಭಾ ಕಚೇರಿಗೆ ಮುತ್ತಿಗೆ ನಡೆಸಿದ 50ಮಂದಿ ಐಕ್ಯರಂಗ ಕಾರ್ಯಕರ್ತರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಐಕ್ಯರಂಗ ಮುಖಂಡರಾದ ಬಶೀರ್ ವೆಳ್ಳಿಕೋತ್, ಬಿ.ಪಿ ಪ್ರದೀಪ್ ಕುಮಾರ್, ಎಂ.ಪಿ ಜಾಫರ್, ಪಿ.ವಿ ಸುರೇಶ್, ಬದ್ರುದ್ದೀನ್, ಹಾರಿಸ್ ಸೇರಿದಂತೆ 50ಮಂದಿಗೆ ಈ ಕೇಸು. ಪ್ರತಿಭಟನಾ ನಿರತರು ಕಚೇರಿ ಬಾಗಿಲು ಮುರಿದಿರುವುದಾಗಿ ನಗರಸಭಾ ಕಾರ್ಯದರ್ಶಿ ನೀಡಿದ ದೂರಿನಲ್ಲಿ ತಿಳಿಸಲಾಘಿದೆ.
ದುರ್ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಕಾರಣವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ನಗರಸಭಾ ಕಚೇರಿಗೆ ಮುತ್ತಿಗೆ ನಡೆಸಲಾಗಿತ್ತು. ಈ ಮಧ್ಯೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವಿದ್ಯಾರ್ಥಿಗಳು ಚೇತರಿಸುತ್ತಿದ್ದಾರೆ. ಜನರೇಟರ್ ಅವೈಜ್ಞಾನಿಕವಾಗಿ ಅಳವಡಿಸಲಾಗಿದೆ ಎಂಬ ಅಂಶವನ್ನು ಪ್ರಾಥಮಿಕ ತನಿಖೆಯಿಂದ ಪತ್ತೆಹಚ್ಚಲಾಗಿದೆ.