ಅಸ್ತಾನ: 'ಭಯೋತ್ಪಾದನೆಗೆ ಸ್ವರ್ಗದಂತಿರುವ, ಭಯೋತ್ಪಾದನೆಯನ್ನು ಬೆಂಬಲಿಸುವಂಥ ದೇಶಗಳನ್ನು 'ಏಕಾಂಗಿಯನ್ನಾಗಿ ಮಾಡಿ, ಅವರ ಕಾರ್ಯತಂತ್ರಗಳನ್ನು ಬಯಲಿಗೆಳೆಯಬೇಕು' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಂತರರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿದರು.
ಇಲ್ಲಿ ನಡೆಯುತ್ತಿರುವ ಎರಡು ದಿನಗಳ ಶಾಂಘೈ ಸಹಕಾರ ಒಕ್ಕೂಟದ (ಎಸ್‌ಸಿಒ) ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಿರಲಿಲ್ಲ.
'ಭಯೋತ್ಪಾದನೆ ನಿರ್ಮೂಲನೆ ಮಾಡುವ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಅದು ನಮ್ಮ ಪ್ರಾದೇಶಿಕತೆಗೂ ಹಾಗೂ ಅಂತರರಾಷ್ಟ್ರೀಯ ಶಾಂತಿಗೂ ಬೆದರಿಕೆ ಒಡ್ಡಲಿದೆ. ಯಾವುದೇ ರೀತಿಯ ಭಯೋತ್ಪಾದನೆಯನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ' ಎಂದರು.
'ಭಯೋತ್ಪಾದನೆಗೆ ನಿರ್ಣಾಯಕ ಪ್ರತಿಕ್ರಿಯೆಯ ಅಗತ್ಯ ಇದೆ. ಇದರೊಂದಿಗೆ ಭಯೋತ್ಪಾದನೆಗೆ ಹಣಕಾಸು ಒದಗಿಸುವುದು ಮತ್ತು ಇಂಥ ಸಂಘಟನೆಗಳಿಗೆ ಕಾರ್ಯಕರ್ತರನ್ನು ಸೇರಿಸಿಕೊಳ್ಳಲು ಅವಕಾಶ ಮಾಡಿಕೊಡುವ ಕಾರ್ಯವನ್ನು ತಡೆಯಬೇಕಿದೆ. ಯುವಕರನ್ನು ಭಯೋತ್ಪಾದನಾ ಸಂಘಟನೆಗಳಿಗೆ ಸೇರಿಸಿಕೊಳ್ಳುತ್ತಿರುವುದು ಮತ್ತು ಇಂಥ ಚಟುವಟಿಕೆಗಳ ಕುರಿತು ಒಲವು ತೋರುತ್ತಿರುವುದು ಗಂಭೀರವಾದುದು. ಆದ್ದರಿಂದ ಇದರ ತಡೆಗೆ ಕ್ರಮ ಕೈಗೊಳ್ಳಬೇಕು' ಎಂದರು.
ಎಲ್‌ಎಸಿ ಸಮಸ್ಯೆ ಬಗೆಹರಿಸಿಕೊಳ್ಳಲು ಬದ್ಧ: ಭಾರತ-ಚೀನಾ
ಚೀನಾದ ನೀತಿಗಳು ಹಾಗೂ ಪೂರ್ವ ಲಡಾಖ್‌ನಲ್ಲಿ ಚೀನಾವು ಬೀಡುಬಿಟ್ಟಿರುವ ಕುರಿತು ಶೃಂಗಸಭೆಯಲ್ಲಿ ಭಾರತವು ಕಟು ಮಾತುಗಳನ್ನು ಆಡಿದೆ. ವಿದೇಶಾಂಗ ಸಚಿವ ಜೈಶಂಕರ್ ಅವರು ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಗುರುವಾರ ಮಾತುಕತೆ ನಡೆಸಿದರು.
'ಎರಡೂ ದೇಶಗಳ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುವ ಹಾಗೂ ಹಳಸಿರುವ ಸಂಬಂಧವನ್ನು ಮರುಸ್ಥಾಪಿಸಿಕೊಳ್ಳುವ' ಕುರಿತು ಮಾತುಕತೆ ನಡೆಯಿತು.
2020ರಿಂದ ಚೀನಾ ಹಾಗೂ ಭಾರತದ ಸಂಬಂಧ ಹಳಸಿದೆ. ಆದ್ದರಿಂದ 'ಎಲ್‌ಎಸಿಗೆ ಸಂಬಂಧಿಸಿ ಪೂರ್ವ ಲಡಾಖ್‌ನಲ್ಲಿ ನಿರ್ಮಾಣವಾಗಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಸಂಬಂಧ ದ್ವಿಪಕ್ಷೀಯ ಒಪ್ಪಂದಕ್ಕೆ ಬದ್ಧವಾಗಿರುವುದು ಅವಶ್ಯಕವಾಗಿದೆ. ಗಡಿ ಸಮಸ್ಯೆಗಳ ಕುರಿತು ಎರಡೂ ದೇಶಗಳು ಈ ಹಿಂದೆಯೇ ರೂಪಿಸಿಕೊಂಡಿರುವ ನಿಯಮಗಳಿಗೆ ಬದ್ಧವಾಗಿರುವುದೂ ಮುಖ್ಯ' ಎಂದು ಜೈಶಂಕರ್ ಹೇಳಿದ್ದಾರೆ.
'ಎರಡೂ ದೇಶಗಳ ಮಧ್ಯದ ಸಂಬಂಧವು ಪರಸ್ಪರ ಗೌರವ ಆಸಕ್ತಿ ಹಾಗೂ ಸಂವೇದನಾಶೀಲತೆಯಿಂದ ಕೂಡಿರಬೇಕು. ಈ ಯಾವುವೂ ಇಲ್ಲವಾದಲ್ಲಿ ಉತ್ತಮ ಸಂಬಂಧ ರೂಪುಗೊಳ್ಳಲು ಸಾಧ್ಯವಿಲ್ಲ. ಜೊತೆಗೆ ಗಡಿಯಲ್ಲಿ ಶಾಂತಿ ನೆಲಸದ ಹೊರತೂ ಎರಡೂ ದೇಶಗಳ ಸಂಬಂಧ ಉತ್ತಮಗೊಳ್ಳುವುದಿಲ್ಲ' ಎಂಬ ಅಭಿಪ್ರಾಯವನ್ನು ಜೈಶಂಕರ್ ಅವರು ಸಭೆಯಲ್ಲಿ ವ್ಯಕ್ತಪಡಿಸಿದ್ದಾರೆ.
'ಗಡಿ ಸಮಸ್ಯೆಯನ್ನು ಇನ್ನಷ್ಟು ಎಳೆದಾಡುವುದು ಎರಡೂ ದೇಶಗಳ ಉನ್ನತಿಗೆ ಸಹಕಾರಿಯಾಗುವುದಿಲ್ಲ ಎನ್ನುವ ಅಭಿಪ್ರಾಯವನ್ನು ಚೀನಾ ಹಾಗೂ ಭಾರತದ ಸಚಿವರು ಒಪ್ಪಿಕೊಂಡಿದ್ದಾರೆ. ದ್ವಿಪಕ್ಷೀಯ ಸಂಬಂಧದ ಕುರಿತ ಹಾಗೂ ಸೇನಾ ಅಧಿಕಾರಿಗಳ ಸಭೆಗಳನ್ನು ಆರಂಭಿಸುವ ಹಾಗೂ ಮುಂದುವರಿಸಿಕೊಂಡು ಹೋಗುವ ಕುರಿತೂ ಸಚಿವರು ಒಪ್ಪಿಗೆ ನೀಡಿದ್ದಾರೆ' ಎಂದು ಭಾರತದ ವಿದೇಶಾಂಗ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.