HEALTH TIPS

ಫ್ರಾನ್ಸ್ ಶಾಸಕಾಂಗ ಚುನಾವಣೆ | ಬಲಪಂಥೀಯ ಪಕ್ಷ ಮುನ್ನಡೆ

          ಪ್ಯಾರಿಸ್ : ಫ್ರಾನ್ಸ್‌ ನಲ್ಲಿ ಶಾಸಕಾಂಗ ಚುನಾವಣೆಯ ಪ್ರಥಮ ಸುತ್ತಿನಲ್ಲಿ ಬಲಪಂಥೀಯ `ನ್ಯಾಷನಲ್ ರ‍್ಯಾಲಿ' ಪಕ್ಷ ಮುನ್ನಡೆ ಸಾಧಿಸಿದ್ದು ಅಧಿಕಾರ ಪಡೆಯುವುದು ಬಹುತೇಕ ಖಚಿತವಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

           ಅಧಿಕಾರ ಉಳಿಸಿಕೊಳ್ಳುವ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಅವರ ಆಶಯಕ್ಕೆ ಮತದಾರ ತಣ್ಣೀರೆರಚಿರುವ ಸೂಚನೆ ಪ್ರಾಥಮಿಕ ಫಲಿತಾಂಶದಿಂದ ವ್ಯಕ್ತವಾಗಿದ್ದು ಮ್ಯಾಕ್ರೋನ್ ಅವರ `ಸೆಂಟ್ರಿಸ್ಟ್ ಗ್ರೂಫ್' ಪಕ್ಷ ತೃತೀಯ ಸ್ಥಾನಕ್ಕೆ ಕುಸಿದಿದೆ.

          ರವಿವಾರ ಎರಡನೇ ಸುತ್ತಿನ ಮತದಾನ ನಡೆಯಲಿದ್ದು ಅದಕ್ಕೂ ಮುನ್ನ ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ನಡೆಸುವ ಮೂಲಕ ಮತದಾರರ ಮನ ಗೆಲ್ಲಲು ಮತ್ತೊಂದು ಪ್ರಯತ್ನ ನಡೆಸಲಿದ್ದಾರೆ.

             ಇದೀಗ ನ್ಯಾಷನಲ್ ರ‍್ಯಾಲಿ ಪಕ್ಷ ಸ್ಪಷ್ಟ ಬಹುಮತ ಪಡೆಯುವುದನ್ನು ತಪ್ಪಿಸಲು ಮ್ಯಾಕ್ರೋನ್ ಅವರ ಪಕ್ಷ ಹಾಗೂ ಎಡಪಂಥೀಯ `ದಿ ನ್ಯೂ ಪಾಪ್ಯುಲರ್ ಫ್ರಂಟ್' ಶತಪ್ರಯತ್ನ ನಡೆಸುವುದು ನಿಶ್ಚಿತವಾಗಿದೆ. ನ್ಯಾಷನಲ್ ರ‍್ಯಾಲಿ ಪಕ್ಷ ಬಹುಮತ ಸಾಧಿಸಿ ಫ್ರಾನ್ಸ್‌ ನಲ್ಲಿ ಎರಡನೇ ವಿಶ್ವಯುದ್ಧದ ಬಳಿಕದ ಪ್ರಥಮ ಬಲಪಂಥೀಯ ಸರಕಾರ ಸ್ಥಾಪಿಸುತ್ತದೆಯೇ ಎಂಬ ಪ್ರಶ್ನೆಗೆ ರವಿವಾರ ನಡೆಯುವ ಎರಡನೇ ಸುತ್ತಿನ ಮತದಾನದ ಫಲಿತಾಂಶ ಉತ್ತರ ನೀಡಲಿದೆ.

           ಪ್ರಥಮ ಸುತ್ತಿನಲ್ಲಿ ಸುಮಾರು 68%ದಷ್ಟು ಮತದಾನವಾಗಿದ್ದು ಮರೀನ್ ಲೆಪೆನ್ ಅವರ `ನ್ಯಾಷನಲ್ ರ‍್ಯಾಲಿ' ಪಕ್ಷ ಬಲಿಷ್ಟ ಮುನ್ನಡೆ ಸಾಧಿಸಿದ್ದು ಸುಮಾರು 33% ಮತಗಳನ್ನು ಗಳಿಸಿದೆ. ಇದರಲ್ಲಿ ನ್ಯಾಷನಲ್ ಪಕ್ಷದ ಜತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ರಿಪಬ್ಲಿಕನ್ ಪಕ್ಷದ ಮತಗಳೂ ಸೇರಿವೆ. ಎಡಪಂಥೀಯ ಪಕ್ಷಗಳ ಒಕ್ಕೂಟ `ದಿ ನ್ಯೂ ಪಾಪ್ಯುಲರ್ ಫ್ರಂಟ್' ಸುಮಾರು 28% ಮತ ಪಡೆದು ದ್ವಿತೀಯ ಸ್ಥಾನ, ಮ್ಯಾಕ್ರೋನ್ ಅವರ `ಸೆಂಟ್ರಿಸ್ಟ್ ಗ್ರೂಫ್' ಪಕ್ಷ ಸುಮಾರು 20% ಮತ ಪಡೆದಿದೆ ಎಂದು ಆಂತರಿಕ ಸಚಿವಾಲಯದ ಪ್ರಕಟಣೆ ತಿಳಿಸಿದೆ.

           ಯುರೋಪಿಯನ್ ಪಾರ್ಲಿಮೆಂಟ್‍ಗೆ ಫ್ರಾನ್ಸ್‌ ನ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ ಮ್ಯಾಕ್ರೋನ್ ಅವರ ಪಕ್ಷಕ್ಕೆ ನ್ಯಾಷನಲ್ ರ‍್ಯಾಲಿ ಪಕ್ಷದ ಎದುರು ಆಘಾತಕಾರಿ ಸೋಲುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅವಧಿ ಪೂರ್ಣ ಚುನಾವಣೆ ನಡೆಸಲು ಮ್ಯಾಕ್ರೋನ್ ನಿರ್ಧರಿಸಿ ಜೂನ್ 9ರಂದು ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಿದ್ದರು. ತನ್ನ ಜನಪ್ರಿಯತೆ ಕುಸಿದಿರುವುದನ್ನು ಸಮೀಕ್ಷೆಗಳ ವರದಿ ಸೂಚಿಸಿದ್ದರೂ, ಶಾಸಕಾಂಗ ಚುನಾವಣೆಯಲ್ಲಿ ದೇಶದ ಮತದಾರರು ತನ್ನ ಕೈಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿ `ರಿಸ್ಕ್' ತೆಗೆದುಕೊಳ್ಳುವುದಾಗಿ ಮ್ಯಾಕ್ರೋನ್ ಹೇಳಿದ್ದರು.

ಆದರೆ ಈ ನಿರೀಕ್ಷೆ ಬಹುತೇಕ ವಿಫಲವಾಗಿದ್ದರೂ ನ್ಯಾಷನಲ್ ರ‍್ಯಾಲಿ ಸಂಪೂರ್ಣ ಬಹುಮತ ಸಾಧಿಸುವುದನ್ನು ತಡೆಯಲು ಈಗಲೂ ಅವಕಾಶವಿದೆ ಎಂದು ಮ್ಯಾಕ್ರೋನ್ ಮತ್ತವರ ಮಿತ್ರಪಕ್ಷಗಳು ವಿಶ್ವಾಸ ಹೊಂದಿವೆ. ಈ ಮಧ್ಯೆ, ಸೋಮವಾರ `ಕುದುರೆ ವ್ಯಾಪಾರ' ಪ್ರಕ್ರಿಯೆ ಆರಂಭವಾಗಿದ್ದು ಪ್ರಥಮ ಸುತ್ತಿನ ಮತದಾನದಲ್ಲಿ ತಾನು ಮೂರನೇ ಸ್ಥಾನ ಪಡೆದಿರುವ ಕ್ಷೇತ್ರದಿಂದ ತನ್ನ ಅಭ್ಯರ್ಥಿಗಳನ್ನು ವಾಪಾಸು ಪಡೆಯುವುದಾಗಿ ಎಡಪಂಥೀಯ ಒಕ್ಕೂಟ ಘೋಷಿಸುವ ಮೂಲಕ ಪರೋಕ್ಷವಾಗಿ ಮ್ಯಾಕ್ರೋನ್‍ಗೆ ಬೆಂಬಲ ಸೂಚಿಸಿದೆ. ಇದಕ್ಕೆ ಪ್ರತಿಯಾಗಿ ಮ್ಯಾಕ್ರೋನ್ ನೇತೃತ್ವದ ಮೈತ್ರಿ ಕೂಟವೂ ಇದೇ ನಡೆಯನ್ನು ಘೋಷಿಸಿದ್ದು ಮೂರನೇ ಸ್ಥಾನ ಪಡೆದಿರುವ ಕ್ಷೇತ್ರದಿಂದ ಎಡಪಂಥೀಯ ಒಕ್ಕೂಟವನ್ನು ಬೆಂಬಲಿಸಿ ತನ್ನ ಅಭ್ಯರ್ಥಿಗಳನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿದೆ.

ರವಿವಾರದ ಮತದಾನದಲ್ಲಿ 78 ಸ್ಥಾನಗಳು ತಮ್ಮ ಜಿಲ್ಲೆಯಲ್ಲಿ 50%ಕ್ಕೂ ಅಧಿಕ ಮತಗಳನ್ನು ಗಳಿಸಿದ ಅಭ್ಯರ್ಥಿಗಳ ಪಾಲಾಗಲಿದೆ ಎಂದು ಫ್ರಾನ್ಸ್‌ ನ ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ, ರವಿವಾರ ತನ್ನ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ `ನ್ಯಾಷನಲ್ ರ‍್ಯಾಲಿ' ಪಕ್ಷದ ಮುಖಂಡೆ ಲೆ ಪೆನ್, ಪ್ರಥಮ ಸುತ್ತಿನ ಮತದಾನದಲ್ಲಿ ತಮ್ಮ ಮೈತ್ರಿಕೂಟವನ್ನು ಬೆಂಬಲಿಸದ ಮತ್ತು ಮೈತ್ರಿಕೂಟದ ಪರ ಮತ ಚಲಾಯಿಸದ ಮತದಾರರ ವಿಶ್ವಾಸವನ್ನು ಗಳಿಸಲು ತಕ್ಷಣ ಕಾರ್ಯನಿರ್ವಹಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಫ್ರಾನ್ಸ್‌ ನ ಜನತೆ ಮಾರ್ಕೋನಿಸ್ಟ್ ಬಣವನ್ನು ಬಹುತೇಕ ಅಳಿಸಿ ಹಾಕಿದ್ದಾರೆ. ಏಳು ವರ್ಷಗಳ ಕಡೆಗಣನೆ ಮತ್ತು ವಿನಾಶಕಾರಿ ಆಡಳಿತದ ಪುಟಗಳನ್ನು ತಿರುಗಿಸಲು ಮತದಾರರು ಆಶಿಸಿರುವುದು ಫಲಿತಾಂಶದಿಂದ ವ್ಯಕ್ತವಾಗಿದೆ ಎಂದವರು ಹೇಳಿದ್ದಾರೆ.

*ರಶ್ಯ ಪರ ಒಲವು

            ನ್ಯಾಷನಲ್ ರ‍್ಯಾಲಿ ಪಕ್ಷ ಸರಕಾರ ರಚಿಸಲು ಸಾಧ್ಯವಾದರೆ, ಮ್ಯಾಕ್ರೋನ್ ಸರಕಾರದ ಹಲವು ಪ್ರಮುಖ ವಿದೇಶಿ ನೀತಿಗಳನ್ನು ರದ್ದುಗೊಳಿಸುವುದಾಗಿ ಲೆ ಪೆನ್ ಚುನಾವಣೆಗೂ ಮುನ್ನ ಘೋಷಿಸಿದ್ದರು. ಉಕ್ರೇನ್‍ಗೆ ಫ್ರಾನ್ಸ್‍ನಿಂದ ದೀರ್ಘ ವ್ಯಾಪ್ತಿಯ ಕ್ಷಿಪಣಿ ಪೂರೈಕೆಯನ್ನು ರದ್ದುಗೊಳಿಸುವುದು ಇದರಲ್ಲಿ ಸೇರಿದೆ. ನ್ಯಾಷನಲ್ ರ‍್ಯಾಲಿ ಪಕ್ಷ ಈ ಹಿಂದಿನಿಂದಲೂ ರಶ್ಯ ಪರ ಒಲವು ಹೊಂದಿದೆ.

              ನ್ಯಾಷನಲ್ ರ‍್ಯಾಲಿ ಪಕ್ಷ ಅಧಿಕಾರಕ್ಕೆ ಬಂದರೆ ಪೆನ್ಷನ್ ಸುಧಾರಣೆ ಯೋಜನೆಯನ್ನು ರದ್ದುಗೊಳಿಸಬಹುದು ಮತ್ತು ನಾಗರಿಕರ ಸ್ವಾತಂತ್ರ್ಯ ಮೊಟಕುಗೊಳ್ಳಬಹುದು ಮತ್ತು ಫ್ರಾನ್ಸ್‌ ನಲ್ಲಿ ಅಂತರ್ಯುದ್ಧದ ಅಪಾಯವಿದೆ ಎಂದು ಮ್ಯಾಕ್ರೋನ್ ಎಚ್ಚರಿಕೆ ನೀಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries