ಲಖನೌ: ಉತ್ತರ ಪ್ರದೇಶದಲ್ಲಿ 2027ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಕಡಿಮೆ ಎಂದು ಪಕ್ಷದ ಶಾಸಕ ಮತ್ತು ಹಿರಿಯ ನಾಯಕ ರಮೇಶ್ ಚಂದ್ರ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.
ಲಖನೌ: ಉತ್ತರ ಪ್ರದೇಶದಲ್ಲಿ 2027ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಕಡಿಮೆ ಎಂದು ಪಕ್ಷದ ಶಾಸಕ ಮತ್ತು ಹಿರಿಯ ನಾಯಕ ರಮೇಶ್ ಚಂದ್ರ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯು ಅತ್ಯಂತ ಕಳಪೆ ಪ್ರದರ್ಶನ ತೋರಿದ ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ.
ಬದಲಾಪುರ ಕ್ಷೇತ್ರದ ಶಾಸಕ ಮಿಶ್ರಾ ಅವರು ವಿಡಿಯೊ ಹೇಳಿಕೆಯಲ್ಲಿ, 'ರಾಜ್ಯದಲ್ಲಿ ಪಕ್ಷದ ಸ್ಥಿತಿ ಕೆಟ್ಟದಾಗಿದೆ. ಕೇಂದ್ರ ನಾಯಕತ್ವವು ಶೀಘ್ರವೇ ಮಧ್ಯಪ್ರವೇಶಿಸಬೇಕು. ಇಲ್ಲದಿದ್ದಲ್ಲಿ ಪರಿಸ್ಥಿತಿ ಇನ್ನೂ ಹದಗೆಡುತ್ತದೆ' ಎಂದು ಹೇಳಿದ್ದಾರೆ.
'ತಕ್ಷಣವೇ ಪಕ್ಷದ ಪುನರುಜ್ಜೀವನಕ್ಕೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ 2027ರ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಅಸಾಧ್ಯ' ಎಂದು ಅಭಿಪ್ರಾಯಪಟ್ಟಿದ್ದಾರೆ. ಮಿಶ್ರಾ ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹಂಚಿಕೆಯಾಗುತ್ತಿದೆ.
'ಸಮಾಜವಾದಿ ಪಕ್ಷವು ಹಿಂದುಳಿದ ವರ್ಗ, ದಲಿತರು ಮತ್ತು ಅಲ್ಪಸಂಖ್ಯಾತರತ್ತ ಗಮನ ಹರಿಸಿತು. ಇದು ಮತದಾರರಲ್ಲಿ ಗೊಂದಲ ಮೂಡಿಸಿತು. ಪರಿಣಾಮವಾಗಿ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಯಿತು' ಎಂದು ಹೇಳಿದ್ದಾರೆ.
'ಕೇಂದ್ರ ನಾಯಕತ್ವವು ಶೀಘ್ರವೇ ಮಧ್ಯಪ್ರವೇಶಿಸಿ ಅಗತ್ಯ ಕ್ರಮ ಕೈಗೊಂಡಲ್ಲಿ, ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ತಮ್ಮ ಕೈಲಾಗುವ ಪ್ರಯತ್ನ ಮಾಡಿದಲ್ಲಿ ಪರಿಸ್ಥಿತಿಯನ್ನು ಮತ್ತೆ ಸರಿದಾರಿಗೆ ತರಬಹುದು' ಎಂದಿದ್ದಾರೆ.
ಲೋಕಸಭಾ ಚುನಾವಣೆ ಫಲಿತಾಂಶ ಮತ್ತು ಸಾಂಸ್ಥಿಕ ಬದಲಾವಣೆ ಉದ್ದೇಶದಿಂದ ರಾಜ್ಯ ಬಿಜೆಪಿ ಘಟಕವು ಭಾನುವಾರ ಸಭೆ ಕರೆದಿತ್ತು. ಇದಕ್ಕೂ ಮೊದಲೇ ಮಿಶ್ರಾ ಅವರ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ.