ತಿರುವನಂತಪುರ: ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 10ರಿಂದ 50 ವರ್ಷ ವಯಸ್ಸಿನ ಹೆಣ್ಣುಮಕ್ಕಳಿಗೆ ನಿರ್ಬಂಧವಿರುವುದರಿಂದ ತಿರುವಾಂಕೂರು ದೇವಸ್ವಂ ಮಂಡಳಿಯು (ಟಿಡಿಬಿ) ತನಗೆ ಉದ್ಯೋಗ ನೀಡದೆ ಲಿಂಗ ತಾರತಮ್ಯ ಮಾಡಿದೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ತಿರುವನಂತಪುರ: ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 10ರಿಂದ 50 ವರ್ಷ ವಯಸ್ಸಿನ ಹೆಣ್ಣುಮಕ್ಕಳಿಗೆ ನಿರ್ಬಂಧವಿರುವುದರಿಂದ ತಿರುವಾಂಕೂರು ದೇವಸ್ವಂ ಮಂಡಳಿಯು (ಟಿಡಿಬಿ) ತನಗೆ ಉದ್ಯೋಗ ನೀಡದೆ ಲಿಂಗ ತಾರತಮ್ಯ ಮಾಡಿದೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
'ಟಿಡಿಪಿಯ ಸಾರ್ವಜನಿಕ ಸಂಬಂಧಗಳ ಅಧಿಕಾರಿ (ಪಿಆರ್‌ಒ) ಹುದ್ದೆಗೆ ನಡೆದ ಲಿಖಿತ ಪರೀಕ್ಷೆಯಲ್ಲಿ ನಾನು ಮೊದಲ ರ್‍ಯಾಂಕ್ ಪಡೆದಿದ್ದೇನೆ. ಆದರೆ ಕೇರಳ ದೇವಸ್ವಂ ನೇಮಕಾತಿ ಮಂಡಳಿಯು ನನ್ನನ್ನು ಆಯ್ಕೆ ಮಾಡಬಾರದು ಎಂಬ ಉದ್ದೇಶದಿಂದ ಸಂದರ್ಶನದಲ್ಲಿ ಬೇಕೆಂದೇ ನನಗೆ ಕಡಿಮೆ ಅಂಕಗಳನ್ನು ನೀಡಿದೆ' ಎಂದು ಆರೋಪಿಸಿ ತಿರುವನಂತಪುರ ನಿವಾಸಿ ನೀತಾ ಎ.ಬಿ ಎಂಬುವವರು ಕೇರಳ ಹೈಕೋರ್ಟ್ ಮೊರೆಹೋಗಿದ್ದಾರೆ.
ಪ್ರಕರಣದ ಕುರಿತು ಪರಿಶೀಲನೆ ನಡೆಸಿದ ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ದೇವಸ್ವಂ ಸಚಿವ ವಿ.ಎನ್ ವಾಸವನ್ ಅವರು ಬುಧವಾರ ತಿಳಿಸಿದರು. ಲಿಖಿತ ಮತ್ತು ಸಂದರ್ಶನದ ಅಂಕಗಳನ್ನು ಒಟ್ಟುಗೂಡಿಸಿ ಒಟ್ಟಾರೆಯಾಗಿ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಗಳಿಸಿರುವ ಅರುಣ್ ಜಿ.ಎಸ್ ಎಂಬುವವರಿಗೆ ಈಗಾಗಲೇ ನೇಮಕಾತಿ ಆದೇಶ ಹೊರಡಿಸಲಾಗಿದ್ದು, ಅವರು ಕರ್ತವ್ಯಕ್ಕೂ ಸೇರಿದ್ದಾರೆ.
ನೀತಾ ಅವರು ಲಿಖಿತ ಪರೀಕ್ಷೆಯಲ್ಲಿ 70 ಅಂಕಗಳನ್ನು ಗಳಿಸಿದ್ದು, ಸಂದರ್ಶನದಲ್ಲಿ ಅವರಿಗೆ 3 ಅಂಕ ನೀಡಲಾಗಿದೆ. ಅರುಣ್ ಅವರು ಲಿಖಿತ ಪರೀಕ್ಷೆಯಲ್ಲಿ 67 ಅಂಕ ಗಳಿಸಿದ್ದರೆ, ಸಂದರ್ಶನದಲ್ಲಿ ಅವರು 7 ಅಂಕ ಪಡೆದುಕೊಂಡಿದ್ದಾರೆ. ಹೀಗಾಗಿ ಒಟ್ಟಾರೆ ಅಂಕಗಳ ಪ್ರಕಾರ ಅರುಣ್ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.
'ಆಯ್ಕೆ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದ ವೇಳೆ ಟಿಡಿಬಿ ಉದ್ಯೋಗಿಯೊಬ್ಬರು, ಮಹಿಳೆಯನ್ನು ಪಿಆರ್‌ಒ ಹುದ್ದೆಗೆ ಆಯ್ಕೆ ಮಾಡುವುದರ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಶಬರಿಮಲೆ ಯಾತ್ರೆ ಹಾಗೂ ಇತರ ಪ್ರಮುಖ ಸಂದರ್ಭಗಳಲ್ಲಿ 2 ತಿಂಗಳು ಪಿಆರ್‌ಒ ಶಬರಿಮಲೆಯಲ್ಲಿ ಇರಬೇಕಾಗುತ್ತದೆ ಎಂದು ಅವರು ಹೇಳಿದ್ದರು. ಹೀಗಾಗಿ ಉದ್ದೇಶಪೂರ್ವಕವಾಗಿ ನನ್ನನ್ನು ಹುದ್ದೆಗೆ ಆಯ್ಕೆ ಮಾಡಿಲ್ಲ ಎಂದು ನೀತಾ ಆರೋಪಿಸಿದ್ದಾರೆ. ಅಲ್ಲದೇ ಸಂದರ್ಶನಕ್ಕೆ ಹಾಜರಾದ ಆರು ಜನ ಅಭ್ಯರ್ಥಿಗಳ ಪೈಕಿ ನನಗೆ ಮಾತ್ರವೇ ಇಷ್ಟು ಕಡಿಮೆ ಅಂಕ ನೀಡಲಾಗಿದೆ' ಎಂದಿದ್ದಾರೆ.