ರೊಗೊಬತ್ ಬೀಚ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಅವರು ಗೆಲ್ಲುವ ಸಾಧ್ಯತೆ ಇಲ್ಲ ಎಂದು ಬರಾಕ್ ಒಬಾಮ ಸೇರಿ ಹಲವು ಡೆಮಾಕ್ರಟಿಕ್ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಜೋ ಬೈಡನ್ ಅವರು ಅಧ್ಯಕ್ಷೀಯ ಚುನಾವಣಾ ರೇಸ್‌ನಿಂದ ಹಿಂದೆ ಸರಿಯಲು ಹತ್ತಿರವಾಗುತ್ತಿದ್ದಾರೆ ಎಂದು ವರದಿಯಾಗಿದೆ.
ಎರಡನೇ ಬಾರಿಗೆ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಗೆ ಪಕ್ಷದೊಳಗೆ ಅವರಿಗೆ ವಿರೋಧ ವ್ಯಕ್ತವಾಗಿದೆ. ಈ ನಡುವೆ ಕೋವಿಡ್ ಸೋಂಕಿಗೆ ತುತ್ತಾಗಿ ತಮ್ಮ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ.
ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ವಿರುದ್ಧ ತಾವು ಸೋಲನುಭವಿಸಬಹುದು ಎನ್ನುವುದನ್ನು ಬೈಡನ್ ಒಪ್ಪಿಕೊಳ್ಳಲು ಆರಂಭಿಸಿದ್ದು, ಹೀಗಾಗಿ ಸ್ಪರ್ಧೆಯಿಂದ ಹಿಂದೆ ಸರಿಯಬಹುದು ಎಂದು ಅವರ ನಿಕಟವರ್ತಿಗಳು ಹೇಳಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ತಮ್ಮ ಬದಲಿಗೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ರನ್ನು, ಅಧ್ಯಕ್ಷೀಯ ಅಭ್ಯರ್ಥಿಯಾಗಿ ಬೈಡನ್ ಅವರು ಅನುಮೋದಿಸಿದರೂ ಅಚ್ಚರಿಪಡಬೇಕಿಲ್ಲ ಎಂದು ಅವರ ಆಪ್ತರೊಬ್ಬರು ಹೇಳಿದ್ದನ್ನು ಪತ್ರಿಕೆ ಉಲ್ಲೇಖಿಸಿದೆ.
ಬೈಡನ್ ತನ್ನ ಉಮೇದುವಾರಿಕೆಯ ಕಾರ್ಯಸಾಧ್ಯತೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಹೇಳಿದ್ದಾಗಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಆದರೆ ಈ ಬಗ್ಗೆ ಒಬಾಮ ಅವರ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
'ಈ ವಾರಂತ್ಯದೊಳಗೆ ಬೈಡನ್ ಅವರು ಸ್ಪರ್ಧೆಯಿಂದ ಹಿಂದೆ ಸರಿಯಬಹುದು' ಎಂದು ಡೆಮಾಕ್ರಟಿಕ್ ಪಕ್ಷದ ಮೂಲಗಳನ್ನು ಉಲ್ಲೇಖಿಸಿ ಆಕ್ಸಿಸ್ ನ್ಯೂಸ್ ವರದಿ ಮಾಡಿದೆ. 'ನಾವು ಅಂತ್ಯಗೊಳಿಸುವ ಸನಿಹಹದಲ್ಲಿದ್ದೇವೆ' ಎಂದು ಬೈಡನ್ ಆಪ್ತರೊಬ್ಬರು ಹೇಳಿದ್ದಾಗಿ ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ.
ಮೂರು ವಾರಗಳ ಹಿಂದೆ ಅಟ್ಲಾಂಟದಲ್ಲಿ ಬೈಡನ್ ಹಾಗೂ ಟ್ರಂಪ್ ನಡುವೆ ನಡೆದ ಮುಖಾಮುಖಿ ಸಂವಾದದಲ್ಲಿ, ಬೈಡನ್ ಅವರು ನೀರಸ ಪ್ರದರ್ಶನ ನೀಡಿದ್ದು. ಆ ಬಳಿಕ ಅವರ ವಯಸ್ಸು ಹಾಗೂ ಆರೋಗ್ಯದ ಬಗ್ಗೆ ಹಲವು ಪ್ರಶ್ನೆಗಳು ಎದುರಾಗಿದ್ದವು. ಈ ಸಂವಾದದ ಬಳಿಕ ಬೈಡನ್ ಹಿಂದೆ ಸರಿಯಬೇಕು ಎನ್ನುವ ಒತ್ತಾಯಗಳು ಪ್ರಬಲವಾಗಿವೆ.