ನಿಮಗೆ ಬಿಸ್ಕೆಟ್ ಎಂಬ ಹೆಸರು ಕೇಳಿದಾಕ್ಷಣ ನೆನಪಾಗೋದು ಪಾರ್ಲೆ-ಜಿ ಬಿಸ್ಕೆಟ್, ಯಾಕಂದ್ರೆ ಈ ಬಿಸ್ಕೆಟ್ ಸೇವಿಸಿದ ಮಂದಿ ತುಂಬಾನೆ ಕಡಿಮೆ. ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಬಿಸ್ಕೆಟ್ ಇದು. 90ರ ದಶಕದಲ್ಲಂತು ಈ ಬಿಸ್ಕೆಟ್ ಇಲ್ಲದ ಮನೆಯೇ ಇಲ್ಲ ಎನ್ನುವಂತಾಗಿತ್ತು. ಈಗಲೂ ಈ ಬಿಸ್ಕೆಟ್ ಸವಿಯುವ ಮಂದಿ ಇದ್ದಾರೆ. ಅದರ ರುಚಿ ಸಹ ಈಗಲೂ ಹಾಗೆಯೇ ಇದೆ.
ವಾಸ್ತವವಾಗಿ ಪಾರ್ಲೆ-ಜಿ ಭಾರತೀಯರಿಗೆ ಕೇವಲ ಬಿಸ್ಕೆಟ್‌ಗಿಂತ ಹೆಚ್ಚು. ಇದು ಅನೇಕ ನೆನಪುಗಳ ತನ್ನಲ್ಲಿಟ್ಟುಕೊಂಡಿದೆ. ಶಾಲೆಯಲ್ಲಿ, ಮಕ್ಕಳಾಗಿದ್ದಾಗ ಸವಿದಿರುವ ನೆನಪು ಈ ಬಿಸ್ಕೆಟ್‌ನೊಂದಿಗೆ ಸೇರಿಕೊಂಡಿದೆ. ಇಂದು ಸಹ ಮಾರುಕಟ್ಟೆಯಲ್ಲಿ ಸಾಕಷ್ಟು ಬಿಸ್ಕತ್ ಗಳಿದ್ದರೂ ಪಾರ್ಲೆ-ಜಿ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ.
ಪ್ಯಾಕೇಜಿಂಗ್‌ನಿಂದ ಹಿಡಿದು ಪಾರ್ಲೆ-ಜಿ ಬಿಸ್ಕೆಟ್‌ಗಳ ಅಡಿಬರಹದವರೆಗೆ ಎಲ್ಲವೂ ಬಹಳ ಜನಪ್ರಿಯವಾಗಿದೆ. ಈ ಬಿಸ್ಕೆಟ್ ಮೇಲಿದ್ದ ಮಗುವಿನಿಂದ ಹಿಡಿದು ಅದರ ಜಾಹೀರಾತುಗಳು ಸಹ ಆಕರ್ಷಕವಾಗಿದ್ದವು. ಸಾಮಾನ್ಯರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲ ವರ್ಗದವರಿಗೂ ಬಿಸ್ಕೆಟ್ ಪ್ರಿಯವಾಗಿತ್ತು. ಈ ಬಿಸ್ಕೆಟ್ ವಿದೇಶದಲ್ಲು ಸಹ ಲಭ್ಯವಾಗುತ್ತಿತ್ತು.
ಆದ್ರೆ ಪಾರ್ಲೆ-ಜಿ ಬಿಸ್ಕೆಟ್ ಹೆಸರಿನಲ್ಲಿರುವ ಜಿ ಪದದ ಅರ್ಥವೇನು ಎಂಬುದನ್ನು ನೀವು ಎಂದಾದರು ಯೋಚಿಸಿದ್ದೀರಾ? ಹೌದು ಜಿ ಎಂಬ ಪದಕ್ಕೆ ಬೇರೆ ಅರ್ಥವೇ ಇದೆ. ಆದರೆ ಈ ಕುರಿತು ಹಲವು ಬಾರಿ ಚರ್ಚೆಗಳು ನಡೆದಿದ್ದರೂ ಅದರ ಸರಿಯಾದ ಅರ್ಥ ಇಂದಿಗೂ ಚರ್ಚೆಯಾಗುತ್ತಲೇ ಇದೆ.
ಪಾರ್ಲೆ-ಜಿಯಲ್ಲಿನ 'ಜಿ' ಅಕ್ಷರವು ಜೀನಿಯಸ್ ಅನ್ನು ಸೂಚಿಸುತ್ತದೆ ಎಂದು ಹಲವಾರು ಮಂದಿ ಭಾವಿಸುತ್ತಾರೆ. ಜೀನಿಯಸ್ ಅಂದರೆ ಬುದ್ಧಿವಂತ. ಆದರೆ ಅನೇಕರಿಗೆ ನಿಜವಾದ ಅರ್ಥ ತಿಳಿದಿಲ್ಲ. ವಾಸ್ತವವಾಗಿ ಪಾರ್ಲೆ-ಜಿ ಹೆಸರಿನ ಹಿಂದಿನ ಕಥೆ ತುಂಬಾ ಆಸಕ್ತಿದಾಯಕವಾಗಿದೆ. ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಪಾರ್ಲೆ-ಜಿ ಬಿಸ್ಕೆಟ್ ಮಾರುಕಟ್ಟೆಯಲ್ಲಿತ್ತು. ಆದರೆ ಆ ಸಮಯದಲ್ಲಿ ಪಾರ್ಲೆ-ಜಿಯನ್ನು ಸರಳವಾಗಿ ಗ್ಲುಕೋ ಬಿಸ್ಕತ್ತು ಎಂದು ಕರೆಯಲಾಗುತ್ತಿತ್ತು.
ಎರಡನೆಯ ಮಹಾಯುದ್ಧದ ಸಮಯದಲ್ಲಿ ಪಾರ್ಲೆ ಗ್ಲುಕೋ ಬಿಸ್ಕತ್ತುಗಳು ಭಾರತೀಯ ಮತ್ತು ಬ್ರಿಟಿಷ್ ಸೈನಿಕರ ನೆಚ್ಚಿನ ಬಿಸ್ಕೆಟ್ ಆಗಿತ್ತು. ಆದರೆ ಸ್ವಾತಂತ್ರ್ಯದ ನಂತರ ದೇಶವು ಆಹಾರದ ಕೊರತೆಯನ್ನು ಎದುರಿಸಿತು. ಇದರಿಂದಾಗಿ ಬಿಸ್ಕೆಟ್ ಉತ್ಪಾದನೆಯನ್ನು ನಿಲ್ಲಿಸಬೇಕಾಯಿತು.
ಕೆಲವು ದಿನಗಳ ನಂತರ ಪಾರ್ಲೆ ಗ್ಲುಕೋ ಬಿಸ್ಕತ್‌ಗಳು ಮತ್ತೆ ಮಾರುಕಟ್ಟೆಗೆ ಬರಲಾರಂಭಿಸಿದವು. ಆ ಸಮಯದಲ್ಲಿ ಅನೇಕ ಸ್ಪರ್ಧಿಗಳು ಮಾರುಕಟ್ಟೆಯನ್ನು ಪ್ರವೇಶಿಸಿದರು. ಬ್ರಿಟಾನಿಯಾ ಗ್ಲುಕೋಸ್-ಡಿ ಬಿಸ್ಕತ್ತುಗಳು ಇಡೀ ಮಾರುಕಟ್ಟೆಯನ್ನು ವಶಪಡಿಸಿಕೊಂಡಿತ್ತು. ಪಾರ್ಲೆಗೆ ಸರಿ ಸಮನಾದ ಪ್ರತಿಸ್ಪರ್ಧಿಯಾಗಿ ಈ ಬಿಸ್ಕೆಟ್ ದಾಳಿ ಇಟ್ಟಿತ್ತು. ಹೀಗಾಗಿ ಪಾರ್ಲೆ ತನ್ನ ಬಿಸ್ಕೆಟ್ ಹೆಸರನ್ನು ಪಾರ್ಲೆ-ಜಿ ಎಂದು ಮರುನಾಮಕರಣ ಮಾಡಿ ಮಾರುಕಟ್ಟೆಗೆ ಪರಿಚಯಿಸಿತು.
ಹೀಗಾಗಿ ಪಾರ್ಲೆ ಜೊತೆಗಿನ ಜಿ ಅಕ್ಷರವು ಗ್ಲುಕೋಸ್ ಅನ್ನು ಪ್ರತಿನಿಧಿಸುತ್ತದೆ. ಸ್ವಾತಂತ್ರ್ಯದ ಮೊದಲು 1939 ರಿಂದ ಇದು ಗ್ಲುಕೋ ಬಿಸ್ಕತ್ತುಗಳಾಗಿ ಲಭ್ಯವಿದ್ದರೂ, 1980 ರ ದಶಕದ ಅಂತ್ಯದಲ್ಲಿ ಇದನ್ನು ಪಾರ್ಲೆ-ಜಿ ಎಂದು ಮರುನಾಮಕರಣ ಮಾಡಲಾಯಿತು. ಹೆಸರು ಬದಲಾವಣೆಯ ನಂತರ, ಇದು ಇತರ ವಿದೇಶಿ ಕಂಪನಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಿತು ಮತ್ತು ಜಾಹೀರಾತನ್ನು ಹೆಚ್ಚಿಸಿತು. ಜೊತೆಗೆ ಕೈಗೆಟುಕುವ ಬೆಲೆಯಲ್ಲಿ ಭಾರತೀಯರಿಗೆ ಇದು ಲಭ್ಯವಾಗಿತ್ತು, ಹೀಗಾಗಿ ಎಲ್ಲ ಕಡೆ ಬಹುಬೇಗ ಇದು ಪಸರಿಸಿತು, ಅಲ್ಲದೆ ಬ್ರಿಟಿಷರ ಬಳಕೆಯಿಂದ ಮತ್ತಷ್ಟು ಖ್ಯಾತಿ ಗಳಿಸಿತು. ಈಗ ಈ ಪಾರ್ಲೆಜಿ ಬಿಸ್ಕೆಟ್‌ನ ಖ್ಯಾತಿ ಸ್ವಲ್ಪ ಕಡಿಮೆಯಾಗಿದ್ದರು. ಬಹುಪಾಲು ಕಡೆಗಳಲ್ಲಿ ಬಳಸಲ್ಪಡುತ್ತಿದೆ. ಬೀದಿ ನಾಯಿಗಳಿಗೆ ಇಂದಿಗೂ ಜನ ಇದೇ ಬಿಸ್ಕೆಟ್ ಹಾಕುವುದನ್ನು ನಾವು ನೋಡಬಹುದು. ಅದ್ರಲ್ಲೂ ಮನೆಯಲ್ಲಿ ಹಿರಿಯರಿದ್ದರೆ ಅವರು ಈ ಬಿಸ್ಕೆಟ್ ಕಾಫಿ-ಟೀ ಜೊತೆ ಸವಿಯುತ್ತಾರೆ.