ಹಾಥರಸ್: ಹಾಥರಸ್ ಜಿಲ್ಲೆಯಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ಮುಖ್ಯ ಆರೋಪಿ ದೇವಪ್ರಕಾಶ ಮಧುಕರ್ ಪತ್ತೆಗಾಗಿ ಉತ್ತರ ಪ್ರದೇಶ ಪೊಲೀಸರು ಶೋಧಕಾರ್ಯವನ್ನು ತೀವ್ರಗೊಳಿಸಿದ್ದಾರೆ. ನೆರೆ ರಾಜ್ಯಗಳಾದ ರಾಜಸ್ಥಾನ ಮತ್ತು ಹರಿಯಾಣದಲ್ಲಿಯೂ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ಶುಕ್ರವಾರ ಹೇಳಿವೆ.
ಹಾಥರಸ್: ಹಾಥರಸ್ ಜಿಲ್ಲೆಯಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ಮುಖ್ಯ ಆರೋಪಿ ದೇವಪ್ರಕಾಶ ಮಧುಕರ್ ಪತ್ತೆಗಾಗಿ ಉತ್ತರ ಪ್ರದೇಶ ಪೊಲೀಸರು ಶೋಧಕಾರ್ಯವನ್ನು ತೀವ್ರಗೊಳಿಸಿದ್ದಾರೆ. ನೆರೆ ರಾಜ್ಯಗಳಾದ ರಾಜಸ್ಥಾನ ಮತ್ತು ಹರಿಯಾಣದಲ್ಲಿಯೂ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ಶುಕ್ರವಾರ ಹೇಳಿವೆ.
ರಾಜ್ಯ ಪೊಲೀಸರು ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು, 'ಭೋಲೆ ಬಾಬಾ' ಎಂದು ಕರೆಯಲಾಗುವ ಸೂರಜ್‌ಪಾಲ್ ಸಿಂಗ್ ಅಲಿಯಾಸ್ ನಾರಾಯಣ ಸಾಕಾರ ವಿಶ್ವಹರಿ ಬಾಬಾ ಅವರನ್ನು ವಿಚಾರಣೆಗೆ ಒಳಪಡಿಸಲಿದ್ದು, ಅವರ ಪತ್ತೆಗಾಗಿಯೂ ಜಾಲ ಬೀಸಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ತನಿಖಾ ತಂಡಗಳು ರಾಜ್ಯದ ಪಶ್ಚಿಮ ಮತ್ತು ಪೂರ್ವ ಭಾಗಗಳ ಹಲವು ಜಿಲ್ಲೆಗಳಿಗೆ ಭೇಟಿ ನೀಡಿವೆ' ಎಂದು ತಿಳಿಸಿದ್ದಾರೆ.
ಜುಲೈ 2ರಂದು ಆಯೋಜಿಸಿದ್ದ 'ಸತ್ಸಂಗ' ಕಾರ್ಯಕ್ರಮದ 'ಮುಖ್ಯ ಸೇವಾದಾರ' ಮಧುಕರ್ ಹೆಸರನ್ನು ಮಾತ್ರ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. 'ಹಲವು ಅಪರಿಚಿತ ಸಂಘಟಕರ' ವಿರುದ್ಧವೂ ಸಿಕಂದ್ರಾರಾವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಈ ವರೆಗೆ 6 ಜನ ಶಂಕಿತರನ್ನು ಬಂಧಿಸಲಾಗಿದೆ.
ವರದಿ ಸಲ್ಲಿಕೆ: ಕಾಲ್ತುಳಿತ ಕುರಿತಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಿದ್ಧಪಡಿಸಿರುವ ಪ್ರಾಥಮಿಕ ವರದಿ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಡಿಜಿಪಿ (ಆಗ್ರಾ ವಲಯ) ಅನುಪಮ್ ಕುಲಶ್ರೇಷ್ಠ ಸೇರಿದಂತೆ ಹಿರಿಯ ಅಧಿಕಾರಿಗಳಿಗೂ ಈ ವರದಿಯನ್ನು ಸಲ್ಲಿಸಲಾಗಿದೆ. ಹಾಥರಸ್ ಜಿಲ್ಲಾಧಿಕಾರಿ ಆಶಿಶ್ ಕುಮಾರ್, ಎಸ್ಪಿ ನಿಪುಣ್ ಅಗರವಾಲ್, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಹೇಳಿಕೆಗಳನ್ನು ಈ ವರದಿ ಒಳಗೊಂಡಿದೆ ಎಂದು ತಿಳಿಸಿದ್ದಾರೆ.
'90ಕ್ಕೂ ಹೆಚ್ಚು ಹೇಳಿಕೆಗಳ ದಾಖಲು': ಕಾಲ್ತುಳಿತ ಘಟನೆಗೆ ಸಂಬಂಧಿಸಿ ವಿಶೇಷ ತನಿಖಾ ತಂಡವು (ಎಸ್‌ಐಟಿ) 90ಕ್ಕೂ ಹೆಚ್ಚು ಹೇಳಿಕೆಗಳನ್ನು ದಾಖಲಿಸಿಕೊಂಡಿದೆ ಎಂದು ತಂಡದ ಮುಖ್ಯಸ್ಥರಾಗಿರುವ ಎಡಿಜಿಪಿ (ಆಗ್ರಾ ವಲಯ) ಅನುಪಮ್ ಕುಲಶ್ರೇಷ್ಠ ಶುಕ್ರವಾರ ಹೇಳಿದ್ದಾರೆ.