HEALTH TIPS

ವಯನಾಡು ಭೂಕುಸಿತ: ಸಂತ್ರಸ್ತರಿಗೆ ಎಲ್ಲ ನೆರವು ಕೊಡಿ- ಲೋಕಸಭೆಯಲ್ಲಿ ರಾಹುಲ್‌ ಮನವಿ

             ವದೆಹಲಿ: ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಂತ್ರಸ್ತರಾದವರ ರಕ್ಷಣೆ ಮತ್ತು ಪುನರ್ವಸತಿಗೆ ಕೇಂದ್ರ ಸರ್ಕಾರ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮಂಗಳವಾರ ಒತ್ತಾಯಿಸಿದರು.

           ಲೋಕಸಭೆಯಲ್ಲಿ ಶೂನ್ಯ ವೇಳೆ ಈ ವಿಷಯ ಪ್ರಸ್ತಾಪಿಸಿದ ರಾಹುಲ್‌, ದುರಂತದಲ್ಲಿ ಮಡಿದವರ ಅವಲಂಬಿತರಿಗೆ ಹೆಚ್ಚಿನ ಪರಿಹಾರ ನೀಡಬೇಕು.

             ಅಲ್ಲಿ ಅಸ್ತವ್ಯಸ್ತಗೊಂಡಿರುವ ಪ್ರಮುಖ ಸಾರಿಗೆ ಮತ್ತು ಸಂವಹನ ವ್ಯವಸ್ಥೆಯನ್ನು ಪುನರ್‌ಸ್ಥಾಪಿಸಬೇಕು. ಪುನರ್‌ವಸತಿ ಕಲ್ಪಿಸಲು ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕು ಎಂದೂ ಅವರು ಒತ್ತಾಯಿಸಿದರು.

             ಕಾಂಗ್ರೆಸ್‌ ಸದಸ್ಯರು ಸರ್ಕಾರ ಪ್ರತಿಕ್ರಿಯೆ ನೀಡಬೇಕೆಂದು ಒತ್ತಾಯಿಸಿದಾಗ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜುಜು, ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಜತೆಗೆ ಮಾತನಾಡಿದ್ದಾರೆ. ಅಲ್ಲದೆ, ಪರಿಹಾರ ಕಾರ್ಯಗಳ ಸಮನ್ವಯಕ್ಕೆ ರಾಜ್ಯ ಖಾತೆಯ ಕೇರಳದ ಸಚಿವರನ್ನೂ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು.

'ಮಂಗಳವಾರ ನಸುಕಿನಲ್ಲಿ ವಯನಾಡ್‌ನಲ್ಲಿ ವಿನಾಶಕಾರಿ ಭೂಕುಸಿತ ಸಂಭವಿಸಿದೆ. ಅಪಾರ ಜೀವಹಾನಿ, ಆಸ್ತಿ ನಷ್ಟ ಆಗಿದೆ. ಮುಂಡಕ್ಕೈ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಗ್ರಾಮದಲ್ಲಿ ಆಗಿರುವ ಜೀವಹಾನಿ ಮತ್ತು ವ್ಯಾಪಕ ಆಸ್ತಿ ಹಾನಿಯನ್ನು ಇನ್ನಷ್ಟೆ ಅಂದಾಜಿಸಬೇಕಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಜತೆಗೆ ನಾನೂ ಮಾತನಾಡಿದ್ದೇನೆ. ರಕ್ಷಣೆ ಮತ್ತು ಪರಿಹಾರ ವಿತರಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ತಕ್ಷಣವೇ ಕೈಗೊಳ್ಳಬೇಕು' ಎಂದು, ವಯನಾಡ್‌ ಲೋಕಸಭಾ ಕ್ಷೇತ್ರವನ್ನು ಈ ಹಿಂದೆ ಪ್ರತಿನಿಧಿಸುತ್ತಿದ್ದ ರಾಹುಲ್‌ ಗಾಂಧಿ ಮನವಿ ಮಾಡಿದರು.

            ಭೂಕುಸಿತ ಪೀಡಿತ ಪ್ರದೇಶಗಳ ನಕ್ಷೆ ರೂಪಿಸಬೇಕು ಮತ್ತು ಕುಸಿತ ತಗ್ಗಿಸಲು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಪಶ್ಚಿಮ ಘಟ್ಟಗಳ ಪರಿಸರದ ದುರ್ಬಲ ಪ್ರದೇಶದಲ್ಲಿ ಹೆಚ್ಚುತ್ತಿರುವ ನೈಸರ್ಗಿಕ ವಿಕೋಪಗಳ ಆವರ್ತನವನ್ನು ತಗ್ಗಿಸಲು ಕ್ರಿಯಾ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಬೇಕು ಎಂದು ರಾಹುಲ್‌ ಒತ್ತಾಯಿಸಿದರು.

            ಈ ವಿಷಯದ ಬಗ್ಗೆ ಸರ್ಕಾರದಿಂದ ಪ್ರತಿಕ್ರಿಯೆಗೆ ಒತ್ತಾಯಿಸಿ, ಘೋಷಣೆಗಳನ್ನು ಕೂಗಲು ಕಾಂಗ್ರೆಸ್ ಸದಸ್ಯರು ಪ್ರಯತ್ನಿಸಿದಾಗ, ಸ್ಪೀಕರ್ ಓಂ ಬಿರ್ಲಾ ಅವರು ಸದಸ್ಯರಿಗೆ ಛೀಮಾರಿ ಹಾಕಿದರು. ನೈಸರ್ಗಿಕ ವಿಕೋಪದ ಸಮಸ್ಯೆಯನ್ನು ರಾಜಕೀಯಗೊಳಿಸಬೇಡಿ ಎಂದು ತಾಕೀತು ಮಾಡಿದರು.

ಆಗ ಸಚಿವ ರಿಜುಜು, 'ಪ್ರಕೃತಿ ವಿಕೋಪವು ಕೇರಳಕ್ಕೆ ಮಾತ್ರವಲ್ಲ, ಎಲ್ಲರಿಗೂ ಕಳವಳಕಾರಿ ವಿಷಯವಾಗಿದೆ. ವಯನಾಡ್‌ನಲ್ಲಿ ಈಗಾಗಲೇ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಅದರ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು' ಎಂದು ಹೇಳಿದರು.

ನಾಲ್ಕು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌

                  ತಿರುವನಂತಪುರ: ನಿರಂತರ ಮಳೆಯಿಂದ ಭೂಕುಸಿತ ಉಂಟಾಗಿರುವ ವಯನಾಡ್‌ ಜಿಲ್ಲೆ ಮತ್ತು ನೆರೆಯ ಮಲಪ್ಪುರಂ ಕೋಯಿಕ್ಕೋಡ್‌ ಕಣ್ಣೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಈ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ 'ರೆಡ್‌ ಅಲರ್ಟ್‌' ಘೋಷಿಸಿತ್ತು.

              ತಿರುವನಂತಪುರ ಕೊಲ್ಲಂ ಪತ್ತನಂತಿಟ್ಟ ಅಲಪ್ಪುಳ ಕೋಟಯಂ ಎರ್ನಾಕುಳಂ ಇಡುಕ್ಕಿ ತ್ರಿಶೂರ್ ಪಾಲಕ್ಕಾಡ್ ಮತ್ತು ಕಾಸರಗೋಡು ಜಿಲ್ಲೆಗಳಿಗೆ ಮಂಗಳವಾರ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ಮಲಪ್ಪುರಂ ಕೋಯಿಕ್ಕೋಡ್ ವಯನಾಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಬುಧವಾರಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

              ಸಂಪೂರ್ಣ ಸಂಪರ್ಕ ಕಳೆದುಕೊಂಡ ಮುಂಡಕ್ಕೈ ಭಾರಿ ಮಳೆಯ ನಡುವೆ ಎನ್‌ಡಿಆರ್‌ಎಫ್ ತಂಡಗಳು ಎರಡು ಹೆಲಿಕಾಪ್ಟರ್‌ಗಳು ಮತ್ತು ಇತರ ರಕ್ಷಣಾ ತಂಡಗಳು ಮುಂಡಕ್ಕೈಗೆ ತೆರಳಿವೆ. ವಯನಾಡ್ ಜಿಲ್ಲೆಯನ್ನು ನಡುಗಿಸಿದ ವಿನಾಶಕಾರಿ ಭೂಕುಸಿತದಿಂದಾಗಿ ಮುಂಡಕ್ಕೈ ಸಂಪೂರ್ಣ ಸಂಪರ್ಕ ಕಳೆದುಕೊಂಡಿದೆ ಎಂದು ರಾಜ್ಯ ಸರ್ಕಾರ ಮಂಗಳವಾರ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries