ರಾಂಚಿ: ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮುಖ್ಯಸ್ಥ ಶಿಬು ಸೊರೆನ್ ಅವರ ಪುತ್ರ ಹೇಮಂತ್ ಸೋರೆನ್ ಗುರುವಾರ ಮೂರನೇ ಬಾರಿಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಂಚಿಯ ರಾಜಭವನದಲ್ಲಿ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರು ಹೇಮಂತ್ ಸೋರೆನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದ ಚಂಪೈ ಸೊರೆನ್ ಅವರು ಬುಧವಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ, ಬುಧವಾರ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಹೇಮಂತ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದರು.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹೇಮಂತ್ ಸೋರೆನ್ ಅವರ ತಂದೆ ಶಿಬು ಸೊರೆನ್, ಹೇಮಂತ್ ಸೋರೆನ್ ಅವರ ಪತ್ನಿ ಮತ್ತು ಗಂಡೆ ಶಾಸಕಿ ಕಲ್ಪನಾ ಸೊರೆನ್ ಕೂಡ ನಿಯೋಗದ ಭಾಗವಾಗಿದ್ದರು.
ಜೆಎಂಎಂ ಮುಖ್ಯಸ್ಥ ಶಿಬು ಸೊರೆನ್ ಅವರ ಪುತ್ರ ಹೇಮಂತ್ ಸೊರೆನ್ ಅವರು ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿದ ನಂತರ ಜೂನ್ 28 ರಂದು ಜೈಲಿನಿಂದ ಬಿಡುಗಡೆಯಾಗಿದ್ದರು. ಬುಧವಾರ, ರಾಜ್ಯದಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟವು ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದೆ.
ಜಾರಿ ನಿರ್ದೇಶನಾಲಯದಿಂದ ಜನವರಿ 31 ರಂದು ಬಂಧಿಸುವ ಮುನ್ನವೇ ಹೇಮಂತ್ ಸೋರೆನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಏತನ್ಮಧ್ಯೆ, ಹೇಮಂತ್ ಸೊರೆನ್‌ಗೆ ಜಾಮೀನು ಮಂಜೂರು ಮಾಡಿದ ಜಾರ್ಖಂಡ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯವು ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ನವದೆಹಲಿಯ ಅಧಿಕೃತ ಮೂಲಗಳು ತಿಳಿಸಿವೆ.