ನವದೆಹಲಿ: 'ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಘಟಿತ ಪ್ರಯತ್ನವು 'ವಿಕಸಿತ್ ಭಾರತ'ದ ಗುರಿ ತಲುಪುವುದನ್ನು ಖಚಿತಪಡಿಸುತ್ತದೆ' ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಇಲ್ಲಿ ತಿಳಿಸಿದರು.
ಬಿಜೆಪಿ ಆಡಳಿತವಿರುವ 13 ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ 15 ಉಪಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಇಲ್ಲಿ ನಡೆದ 'ಮುಖ್ಯಮಂತ್ರಿ ಪರಿಷದ್'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ವಿಷಯ ಪ್ರಸ್ತಾಪಿಸಿದರು.
'ಪರಂಪರೆಯನ್ನು ಅಭಿವೃದ್ಧಿಪಡಿಸುವುದು ಹಾಗೂ ಅಭಿವೃದ್ಧಿಯ ಪರಂಪರೆಯ ನಿರ್ಮಾಣಕ್ಕೆ 'ವಿಕಸಿತ್ ಭಾರತ್' ಕಲ್ಪನೆಯಲ್ಲಿ ವಿಶೇಷ ಸ್ಥಾನವಿರುವುದನ್ನು ಮೋದಿ ತಿಳಿಸಿದರು' ಎಂದು ಪಕ್ಷದ ಹಿರಿಯ ನಾಯಕ ವಿನಯ್ ಸಹಸ್ರಬುದ್ಧೆ ಮಾಧ್ಯಮಗಳಿಗೆ ತಿಳಿಸಿದರು.
'ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಸರ್ಕಾರದ ಕಾರ್ಯಸೂಚಿ ಕುರಿತು ಮೋದಿ ಸುದೀರ್ಘವಾಗಿ ಮಾತನಾಡಿದರು. ಸರ್ಕಾರದ ಕಲ್ಯಾಣ ಯೋಜನೆಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯ ಮಹತ್ವವನ್ನು ಒತ್ತಿ ಹೇಳಿದರು. ವಿವಿಧ ಯೋಜನೆಗಳನ್ನು ಎಲ್ಲಾ ಸಮುದಾಯಗಳನ್ನು ಗರಿಷ್ಠ ಮಟ್ಟದಲ್ಲಿ ತಲುಪಲು ಸಾಮಾಜಿಕ ಮಾಧ್ಯಮಗಳನ್ನು ಬಳಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು ಎಂದು' ಸಹಸ್ರಬುದ್ಧೆ ವಿವರಿಸಿದರು.
ಆಡಳಿತದ ವಿಚಾರಗಳ ಕುರಿತು ಹೆಚ್ಚು ಕೇಂದ್ರಿಕರಿಸುವ 'ಮುಖ್ಯಮಂತ್ರಿ ಪರಿಷದ್'ನಲ್ಲಿ ಬಿಜೆಪಿ ಹಿರಿಯ ನಾಯಕರಾದ ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾಗವಹಿಸಿದ್ದರು.
ರಾಷ್ಟ್ರೀಯ ಶಿಕ್ಷಣ ನೀತಿ-2020 (ಎನ್‌ಇಪಿ) ಹಾಗೂ ಅದರ ಅನುಷ್ಠಾನದಲ್ಲಿ ರಾಜ್ಯಗಳ ಪಾತ್ರದ ಕುರಿತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಮಾತನಾಡಿದರು. ಈ ವೇಳೆ ಜಾರಿಗೊಳಿಸಲಾದ ಮಹತ್ವದ ಯೋಜನೆಗಳ ಕುರಿತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ವಿವರ ನೀಡಿದರು.
ಕಲ್ಯಾಣ ಯೋಜನೆಗಳ ಪ್ರಾಮಾಣಿಕ ಜಾರಿ ಹಾಗೂ ಉತ್ತಮ ಆಡಳಿತಕ್ಕೆ ಮಾದರಿ ರಾಜ್ಯವನ್ನಾಗಿ ರೂಪಿಸಬೇಕು ಎಂದು ಪಕ್ಷದ ನಾಯಕರ ಜೊತೆಗಿನ ಸಂವಾದದಲ್ಲಿ ಮೋದಿ ಅವರು ಪ್ರಸ್ತಾಪಿಸಿದರು.
'ನಮ್ಮ ಪಕ್ಷವು ಉತ್ತಮ ಆಡಳಿತ ನೀಡಲು, ಜನರ ಆಶೋತ್ತರಗಳನ್ನು ಈಡೇರಿಸಲು ಅವಿರತವಾಗಿ ಶ್ರಮಿಸುತ್ತಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ 'ಎಕ್ಸ್'ನಲ್ಲಿ ತಿಳಿಸಿದ್ದರು.