ತಿರುವನಂತಪುರ: ಶ್ರೀಪದ್ಮನಾಭ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಚಿಕನ್ ಬಿರಿಯಾನಿ ಔತಣಕೂಟಕ್ಕೆ ಕೆ.ಪಿ ಶಶಿಕಲಾ ಟೀಚರ್ ಖಾರವಾಗಿ ಪ್ರತಿಕ್ರಿಯಿಸಿರುವರು.
ಉದ್ದೇಶಪೂರ್ವಕವಾಗಿ ದೇವಾಲಯದ ಶಿಷ್ಟಾಚಾರವನ್ನು ಉಲ್ಲಂಘಿಸುವುದು ಸ್ವೀಕಾರಾರ್ಹವಲ್ಲ ಮತ್ತು ಜವಾಬ್ದಾರಿಯುತರು ತಮ್ಮ ಪ್ರಸ್ತುತ ಸ್ಥಾನಗಳಲ್ಲಿ ಮುಂದುವರಿಯಲು ಅರ್ಹರಲ್ಲ ಎಂದು ಶಶಿಕಲಾ ಟೀಚರ್ ಸೂಚಿಸಿದರು.
ಶ್ರೀಪದ್ಮನಾಭ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದಿರುವುದು ಅತ್ಯಂತ ಅಹಿತಕರ ಘಟನೆ. ದೇವಸ್ಥಾನದ ಸಿಬ್ಬಂದಿಗೆ ವಿಧಿ-ವಿಧಾನಗಳು ಗೊತ್ತಿಲ್ಲದಿದ್ದರೆ ನಂಬಲು ಸಾಧ್ಯವಿಲ್ಲ. ಇದರಿಂದ ದೇವಸ್ಥಾನದ ಶಿಷ್ಟಾಚಾರವನ್ನು ತಿಳಿದೂ ಉಲ್ಲಂಘಿಸಲಾಗಿದೆ ಎಂದು ತಿಳಿಯಬಹುದು. ಇದು ಅತ್ಯಂತ ಗಂಭೀರವಾದ ಅಪರಾಧ. ದೇವಾಲಯವನ್ನು ಭಗವಂತನ ದೇಹವೆಂದು ನೋಡಲಾಗುತ್ತದೆ. ಪ್ರತಿಯೊಂದು ಭಾಗವನ್ನೂ ದೇಗುಲದಂತೆ ಶುದ್ಧವಾಗಿಡಬೇಕು. ಇಂತಹ ಜಾಗದಲ್ಲಿ ಬಿರಿಯಾನಿ ಟ್ರೀಟ್ ನಡೆದಿದೆ ಎಂದು ಹೇಳುವುದನ್ನು ಒಪ್ಪಲಾಗದು ಎಂದಿರುವರು.
ನೌಕರರು ಮಾಂಸ ತಿನ್ನುವುದು ಅವರ ವೈಯಕ್ತಿಕ ಸ್ವಾತಂತ್ರ್ಯ. ಆದರೆ ಅದನ್ನು ದೇವಸ್ಥಾನದ ಒಳಗೆ ತಂದಿರುವುದನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ. ಇದು ಅವರ ಧಾರ್ಮಿಕ ಕಲ್ಪನೆಯ ಮಟ್ಟದ ಸೂಚಕ ಮತ್ತು ಸಂಪ್ರದಾಯಗಳನ್ನು ಮುರಿಯಲು ಯಾವುದೇ ಹಿಂಜರಿಕೆಯಿಲ್ಲ ಎಂದು ಇನ್ನಷ್ಟು ಸ್ಪಷ್ಟಪಡಿಸಿತು. ಕೇವಲ ದಂಡನಾತ್ಮಕ ಕ್ರಮಗಳು ಪರಿಹಾರವಲ್ಲ. ಭಕ್ತರು ಶಿಷ್ಟಾಚಾರ ಪಾಲಿಸುವಂತೆ ನೋಡಿಕೊಳ್ಳಬೇಕಾದ ಸಿಬ್ಬಂದಿಯೇ ಇದನ್ನು ಮಾಡಿರುವರು. ಅವರು ಅದನ್ನು ವೃತ್ತಿಯಾಗಿ ನೋಡುತ್ತಾರೆ. ಜವಾಬ್ದಾರಿಯುತ ಹುದ್ದೆಯಲ್ಲಿ ಉಳಿಯಲು ಅರ್ಹರಲ್ಲ ಎಂದು ಸೂಚಿಸಿದರು.
ಜುಲೈ 6 ರಂದು ಶ್ರೀಪದ್ಮನಾಭ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಚಿಕನ್ ಬಿರಿಯಾನಿ ಔತಣ ಕೂಟ ಏರ್ಪಡಿಸಲಾಗಿತ್ತು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳ ಕಛೇರಿಯಲ್ಲಿ ಮಾಂಸಾಹಾರ ಏರ್ಪಡಿಸಲಾಗಿತ್ತು. ನೌಕರನ ಮಗನಿಗೆ ಉದ್ಯೋಗ ಲಭಿಸಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ನಡೆಸಲಾಯಿತು. ದೃಶ್ಯಗಳ ಸಮೇತ ಮಾಹಿತಿ ಹೊರಬಿದ್ದ ಬಳಿಕ ಭಕ್ತರು ಹಾಗೂ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಇಳಿದಿದ್ದವು. ದೇವಸ್ಥಾನದ ತಂತ್ರಿಗಳ ನಿರ್ದೇಶನದಂತೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಮತ್ತು ಕಾರ್ಯನಿರ್ವಾಹಕ ಅಧಿಕಾರಿಯನ್ನು ಬದಲಾಯಿಸಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿವೆ.