ಬರೇಲಿ: ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಸಿದ್ಧರಿರುವ ಪುರುಷ-ಮಹಿಳೆಯರಿಗೆ ಸಾಮೂಹಿಕ ವಿವಾಹ ನಡೆಸಲು ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ (ಐಎಂಸಿ) ಎಂಬ ಸ್ಥಳೀಯ ರಾಜಕೀಯ ಸಂಘಟನೆಯು ಮುಂದಾಗಿದ್ದು, ಅದಕ್ಕೆ ಸ್ಥಳೀಯ ಆಡಳಿತ ಅನುಮತಿ ನಿರಾಕರಿಸಿದೆ.
ಐಎಂಸಿ ಮುಖ್ಯಸ್ಥ ತೌಕೀರ್ ರಜಾ ಖಾನ್ ಎಂಬುವವರು ಈ ರೀತಿ ಸಾಮೂಹಿಕ ವಿವಾಹ ನಡೆಸುವುದಾಗಿ ಪ್ರಕಟಿಸಿ, ಮತಾಂತರಗೊಂಡ ಪುರುಷ-ಮಹಿಳೆಯರನ್ನು ಆಹ್ವಾನಿಸಿದ್ದರು.
'ನಾವು ಕಾನೂನುಬದ್ಧವಾಗಿಯೇ ಕೆಲಸ ಮಾಡುತ್ತಿದ್ದೇವೆ. ಸಾಮೂಹಿಕ ವಿವಾಹವನ್ನು ಸ್ಥಳೀಯ ಆಡಳಿತದ ಅನುಮತಿ ಪಡೆದ ನಂತರವೇ ನಡೆಸುತ್ತೇವೆ. ಈಗ ಅನುಮತಿ ನಿರಾಕರಿಸಲಾಗಿದೆ' ಎಂದು ಬುಧವಾರ ತೌಕೀರ್ ಪ್ರತಿಕ್ರಿಯಿಸಿದರು.
ಸಾಮೂಹಿಕ ವಿವಾಹಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಮತಿ ನೀಡಲಿಲ್ಲ ಎಂದು ಐಎಂಸಿ ರಾಜ್ಯ ಉಸ್ತುವಾರಿ ನದೀಮ್ ಖುರೇಶಿ ತಿಳಿಸಿದರು.
ಜುಲೈ 21ರಂದು ಬೆಳಿಗ್ಗೆ 11 ಗಂಟೆಗೆ ಖಲೀಲ್ ಪ್ರೌಢಶಾಲೆಯ ಆವರಣದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ಪುರುಷ-ಮಹಿಳೆಯರಿಗೆ ಸಾಮೂಹಿಕ ವಿವಾಹ ಆಯೋಜಿಸಿರುವುದಾಗಿ ಐಎಂಸಿ ಪ್ರಕಟಿಸಿತ್ತು. ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಮಂಗಳವಾರ ಸಂಜೆ ಅನುಮತಿ ನಿರಾಕರಿಸಿರುವುದಾಗಿ ಹೇಳಿದರು.
ಸಾಮೂಹಿಕ ವಿವಾಹವನ್ನು ಮುಂದೂಡಲಾಗಿದ್ದು, ಅನುಮತಿ ಸಿಕ್ಕ ನಂತರ ಆಯೋಜಿಸುವುದಾಗಿ ಐಎಂಸಿ ತಿಳಿಸಿದೆ.