HEALTH TIPS

ಕಾಂಗ್ರೆಸ್‌ ಕೈಗೆ ಸಿಕ್ಕಿ ದಲಿತರು ಬಲಿಪಶು: ಮೋದಿ ವಾಗ್ದಾಳಿ

          ವದೆಹಲಿ: ಭ್ರಷ್ಟಾಚಾರದ ವಿಷಯದಲ್ಲಿ ವಿಪಕ್ಷಗಳು ದ್ವಿಮುಖ ನೀತಿ ತಳೆದಿವೆ ಎಂದು ಕಿಡಿಕಾರಿದ ಪ್ರಧಾನಿ ನರೇಂದ್ರ ಮೋದಿ, 'ಒಂದು ಕುಟುಂಬವನ್ನು ರಕ್ಷಿಸುವ ಸಲುವಾಗಿ ಕಾಂಗ್ರೆಸ್‌ ಪಕ್ಷವು ದಲಿತರು ಹಾಗೂ ಹಿಂದುಳಿದ ವರ್ಗಗಳ ನಾಯಕರನ್ನು ಬಲಿಪಶು ಮಾಡುತ್ತಿದೆ' ಎಂದು ಆರೋಪಿಸಿದರು.

            ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ರಾಜ್ಯಸಭೆಯಲ್ಲಿ ಬುಧವಾರ ಉತ್ತರ ನೀಡಿದ ಅವರು, 'ಇಂತಹ ಪರಿಸ್ಥಿತಿ ಎದುರಾದಾಗ ದಲಿತರು ಹಾಗೂ ಹಿಂದುಳಿದ ನಾಯಕರು ಎಲ್ಲ ಹೊರೆಯನ್ನು ಹೊರಬೇಕು ಹಾಗೂ ಆ ಕುಟುಂಬ (ಗಾಂಧಿ ಕುಟುಂಬ) ಸುರಕ್ಷಿತವಾಗಿ ಉಳಿಯುತ್ತಿತ್ತು' ಎಂದು ವ್ಯಂಗ್ಯವಾಡಿದರು.

           'ಲೋಕಸಭಾಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಅದೇ ರೀತಿಯ ಸನ್ನಿವೇಶ ಮರುಕಳಿಸಿತು. ತಮ್ಮ ಸೋಲು ಖಚಿತ ಎಂದು ತಿಳಿದಿದ್ದರೂ ಅವರು ಮುಂದುವರಿಯಲಿಲ್ಲವೇ. ಅವರು ಒಬ್ಬ ದಲಿತ ಸಂಸದನನ್ನು ಕಣಕ್ಕೆ ಇಳಿಸಿದರು' ಎಂದು ಅವರು ಕುಟುಕಿದರು. ಪ್ರಧಾನಿ ಭಾಷಣದ ಸಂದರ್ಭದಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಸಭಾಪತಿ ಜಗದೀಪ್‌ ಧನಕರ್ ಅವಕಾಶ ನೀಡಲಿಲ್ಲ. ಈ ನಡೆಯನ್ನು ಖಂಡಿಸಿ ಕಾಂಗ್ರೆಸ್‌ ನೇತೃತ್ವದ ವಿಪಕ್ಷ ಪ್ರತಿಭಟನೆ ನಡೆಸಿ ಸಭಾತ್ಯಾಗ ನಡೆಸಿತು.

              'ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಚುನಾವಣೆಗಳಲ್ಲಿ ಸುಶೀಲ್‌ ಕುಮಾರ್ ಶಿಂಧೆ ಅವರನ್ನು ಕಾಂಗ್ರೆಸ್‌ನವರು ಕಣಕ್ಕೆ ಇಳಿಸಿದರು. ದಲಿತ ನಾಯಕರು ಸೋತರೆ ಕಾಂಗ್ರೆಸ್‌ ಕಳೆದುಕೊಳ್ಳುವುದು ಏನಿಲ್ಲ. 2017ರಲ್ಲಿ ಸೋಲು ಖಚಿತವೆಂದು ತಿಳಿದಿದ್ದರೂ ಮೀರಾ ಕುಮಾರ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದರು. ಕಾಂಗ್ರೆಸ್‌ ಪಕ್ಷವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿರೋಧಿ ಮನಸ್ಥಿತಿಯನ್ನು ಹೊಂದಿದೆ. ಅದಕ್ಕೆ ಅವರು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಪದೇ ಪದೇ ಅವಮಾನ ಮಾಡುತ್ತಿದ್ದರು' ಎಂದು ಅವರು ಹೇಳಿದರು.

               ಈ ಮನಸ್ಥಿತಿಯೊಂದಿಗೆ ಅವರು ಮೊದಲ ಆದಿವಾಸಿ ರಾಷ್ಟ್ರಪತಿಯನ್ನು ಕೂಡಾ ಅವಮಾನಿಸುತ್ತಿದ್ದಾರೆ ಹಾಗೂ ಬೇರೆ ಯಾರೂ ಬಳಸದ ಪದಗಳನ್ನು ಬಳಸುತ್ತಿದ್ದಾರೆ ಎಂದರು.

ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿಯು ಕಾಂಗ್ರೆಸ್‌ ಜತೆಗೆ ಕೈಜೋಡಿಸಿದ್ದನ್ನು ಪ್ರಸ್ತಾಪಿಸಿದ ಪ್ರಧಾನಿ, 'ಛತ್ತೀಸಗಢದಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಹೆಸರು ಅಬಕಾರಿ ಹಗರಣದಲ್ಲಿ ಕೇಳಿಬಂದಿತ್ತು. ಮುಖ್ಯಮಂತ್ರಿಯನ್ನು ಜೈಲಿಗೆ ಹಾಕಬೇಕು ಎಂದು ಎಎಪಿ ಒತ್ತಾಯಿಸಿತ್ತು. ಅಂತಹ ಪಕ್ಷದೊಂದಿಗೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದೆ' ಎಂದರು.

               ಕಾಂಗ್ರೆಸ್‌ ಪಕ್ಷವು ದ್ವಂದ್ವ ನಿಲುವುಗಳನ್ನು ಹೊಂದಿದೆ ಎಂದು ವಾಗ್ದಾಳಿ ನಡೆಸಿದ ಮೋದಿ, 'ಅಕ್ರಮಗಳಲ್ಲಿ ಭಾಗಿಯಾದ ನಾಯಕರ ಜತೆಗೆ ಕಾಂಗ್ರೆಸ್‌ ನಾಯಕರು ನವದೆಹಲಿಯಲ್ಲಿ ವೇದಿಕೆ ಹಂಚಿಕೊಳ್ಳುತ್ತಾರೆ. ಆದರೆ, ಕೇರಳದ ಮುಖ್ಯಮಂತ್ರಿಯನ್ನು ಜೈಲಿಗೆ ಅಟ್ಟಬೇಕು ಎಂದು 'ಯುವರಾಜ' (ರಾಹುಲ್‌ ಗಾಂಧಿ) ಒತ್ತಾಯಿಸುತ್ತಾರೆ. ಆದರೆ, ದೆಹಲಿಯಲ್ಲಿ ಸಿಬಿಐ-ಇಡಿಗೆ ಎಚ್ಚರಿಕೆ ನೀಡುತ್ತಾರೆ' ಎಂದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries