ಸಾಂಗ್ಲಿ: ಆರು ತಿಂಗಳಿಂದ ಮೂರು ವರ್ಷ ವಯಸ್ಸಿನ ಮಕ್ಕಳಿಗಾಗಿ ಅಂಗನವಾಡಿಯಲ್ಲಿ ವಿತರಿಸಲಾಗುವ ಆಹಾರದ ಪೊಟ್ಟಣದಲ್ಲಿ ಸತ್ತಿದ್ದ ಹಾವಿನಮರಿ ಪತ್ತೆಯಾದ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪಲುಸ್‌ನಲ್ಲಿ ನಡೆದಿದೆ. ಸಂಬಂಧಪಟ್ಟ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

ಮಗುವೊಂದರ ಪೋಷಕರು ಘಟನೆ ಕುರಿತು ಸೋಮವಾರ ಮಾಹಿತಿ ನೀಡಿದರು ಎಂದು ರಾಜ್ಯ ಅಂಗನವಾಗಿ ಕಾರ್ಯಕರ್ತರ ಸಂಘದ ಉಪಾಧ್ಯಕ್ಷೆ ಆನಂದಿ ಭೋಸಲೆ ಅವರು ಹೇಳಿದ್ದಾರೆ.
ಈ ಘಟನೆಯು ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲೂ ಪ್ರತಿಧ್ವನಿಸಿದ್ದು, ಕಲಾಪದ ವೇಳೆ ಪಲುಸ್- ಕಾಡೆಗಾವ್‌ನ ಕಾಂಗ್ರೆಸ್ ಶಾಸಕ ವಿಶ್ವಜಿತ್ ಕದಮ್ ಈ ಘಟನೆಯನ್ನು ಪ್ರಸ್ತಾಪಿಸಿದರು. 'ಇದೊಂದು ಗಂಭೀರ ಘಟನೆ. ಕೂಲಂಕಷ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಮಾಡಬೇಕು' ಎಂದು ಆಗ್ರಹಿಸಿದರು.
'ಆಹಾರ ಪೊಟ್ಟಣದಲ್ಲಿದ್ದ ಹಾವಿನಮರಿಯ ಚಿತ್ರ ತೆಗೆದ ಪೋಷಕರು ಅದನ್ನು ಅಂಗನವಾಡಿ ಕಾರ್ಯಕರ್ತೆಯೊಬ್ಬರಿಗೆ ವಾಟ್ಸ್‌ಆಯಪ್ ಮೂಲಕ ಕಳುಹಿಸಿದ್ದರು. ಆ ಕಾರ್ಯಕರ್ತೆಯು ಅದನ್ನು ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಗುಂಪಿಗೆ ಕಳುಹಿಸಿದ್ದರು. ನಾವು ಪೊಟ್ಟಣದಲ್ಲಿದ್ದ ಆಹಾರದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ' ಎಂದು ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜುಲೈ 2ರಂದು ನಡೆದ ಸಭೆಯಲ್ಲಿ ಈ ಘಟನೆ ಕುರಿತು ಪ್ರಸ್ತಾಪಿಸಲಾಯಿತು. ಸಾಂಗ್ಲಿ ಜಿಲ್ಲಾ ಪರಿಷತ್‌ನ ಉಪ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಂದೀಪ್ ಯಾದವ್ ಅವರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಆಹಾರ ಪೊಟ್ಟಣಗಳ ದಾಸ್ತಾನು ಇರುವ ಉಗ್ರಾಣವನ್ನು ಮೊಹರು ಮಾಡಲಾಗಿದೆ ಎಂದು ಆನಂದಿ ಭೋಸಲೆ ಹೇಳಿದರು.