ನವದೆಹಲಿ: 'ಜಪಾನ್‌ನ ರೆಂಕೋಜಿ ದೇಗುಲದಲ್ಲಿ ಇರಿಸಿರುವ ನೇತಾಜಿ ಅವರ ಅಸ್ಥಿಯನ್ನು ಆಗಸ್ಟ್ 18ರೊಳಗೆ ಭಾರತಕ್ಕೆ ಮರಳಿ ತರಬೇಕು' ಎಂದು ಸುಭಾಷ್ ಚಂದ್ರ ಬೋಸ್ ಮೊಮ್ಮಗ ಚಂದ್ರ ಕುಮಾರ್ ಬೋಸ್ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಪ್ರಧಾನಿಗೆ ಪತ್ರ ಬರೆದಿರುವ ಅವರು, 'ನೇತಾಜಿ ಅವರ ಅಸ್ಥಿಯನ್ನು ರೆಂಕೋಜಿಯಿಂದ ಭಾರತಕ್ಕೆ ಮರಳಿ ತರಬೇಕು ಎಂದು ನಿಮ್ಮಲ್ಲಿ ಮನವಿ ಮಾಡುತ್ತೇನೆ' ಎಂದಿದ್ದಾರೆ.
'ನೇತಾಜಿ ಕುರಿತ ಸುಳ್ಳು ನಿರೂಪಣೆಗಳಿಗೆ ಅಂತ್ಯ ಹಾಡಲು ನೇತಾಜಿ ಸಾವಿನ ಬಗ್ಗೆ ಕೇಂದ್ರ ಸರ್ಕಾರದಿಂದ ಅಂತಿಮ ಹೇಳಿಕೆ ಬರಬೇಕಿದೆ' ಎಂದೂ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪಶ್ವಿಮ ಬಂಗಾಳದ ರಾಜ್ಯ ಬಿಜೆಪಿ ಘಟಕದ ಮಾಜಿ ಉಪಾಧ್ಯಕ್ಷರೂ ಆಗಿರುವ ಚಂದ್ರ ಕುಮಾರ್ ಬೋಸ್, 'ನೇತಾಜಿ ಸಾವಿನ ಸಿದ್ದಾಂತಗಳ ವರ್ಗೀಕರಣ ಪ್ರಕ್ರಿಯೆಯು ರಹಸ್ಯ ಕಡತಗಳು ಮತ್ತು ದಾಖಲೆಗಳನ್ನು ಬಹಿರಂಗಪಡಿಸಿದೆ. ಆಗಸ್ಟ್ 18, 1945ರಂದು ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ನಿಧನರಾದರು ಎಂದು ಅದು ಹೇಳುತ್ತದೆ' ಎಂದಿದ್ದಾರೆ.
'ಸ್ವಾತಂತ್ರ್ಯದ ನಂತರ ನೇತಾಜಿ ಭಾರತಕ್ಕೆ ಮರಳಲು ಬಯಸಿದ್ದರು, ಆದರೆ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದರಿಂದ ಸಾಧ್ಯವಾಗಲಿಲ್ಲ' ಎಂದು ಹೇಳಿದ್ದಾರೆ.
'ನೇತಾಜಿ ಅವರ ಅಸ್ಥಿಯನ್ನು ಜಪಾನ್‌ನ ರೆಂಕೋಜಿಯಲ್ಲಿ ಇರಿಸಿರುವುದು ನೇತಾಜಿ ಅವರಿಗೆ ಮಾಡುವ ಅತಿದೊಡ್ಡ ಅಪಮಾನ' ಎಂದು ಅಸಮಾಧಾನ ಹೊರಹಾಕಿದ್ದಾರೆ.
'ಕಳೆದ ಮೂರುವರೆ ವರ್ಷದಿಂದ ಪ್ರಧಾನಿ ಅವರಿಗೆ ಪತ್ರ ಬರೆಯುತ್ತಿದ್ದು, ನೇತಾಜಿ ಅವರ ಅಸ್ಥಿ ಭಾರತ ನೆಲವನ್ನು ಸ್ಪರ್ಶಿಸುವುದು ಅವರಿಗೆ ನೀಡುವ ಅತಿದೊಡ್ಡ ಗೌರವಾಗಿದೆ ಎಂದು ತಿಳಿಸಿದ್ದೇವೆ' ಎಂದು ತಿಳಿಸಿದ್ದಾರೆ.
'ರೆಂಕೋಜಿಯಲ್ಲಿ ಇರಿಸಿರುವ ನೇತಾಜಿ ಅವರದ್ದು ಎನ್ನಲಾದ ಅಸ್ಥಿ ಬಗ್ಗೆ ಭಾರತ ಸರ್ಕಾರ ಪ್ರತಿಕ್ರಿಯಿಸಬೇಕು ಎಂದು ನಾನು ಆಗ್ರಹಿಸುತ್ತೇನೆ. ಒಂದು ವೇಳೆ ಅಲ್ಲಿಯಿರುವ ಅಸ್ಥಿ ನೇತಾಜಿ ಅವರದ್ದು ಅಲ್ಲ ಎಂದಾರೆ, ಅದರ ನಿರ್ವಹಣೆಗೆ ಹಣ ಒದಗಿಸಬಾರದು. ಈ ಬಗ್ಗೆ ಪ್ರಧಾನಿಯವರಿಂದ ಹೇಳಿಕೆ ನಿರೀಕ್ಷಿಸಲಾಗಿದೆ' ಎಂದು ಹೇಳಿದ್ದಾರೆ.