HEALTH TIPS

ಪ್ರಾಬಲ್ಯ ಸಾಧಿಸುವ ಯತ್ನ ಬೇಡ: ಚೀನಾಗೆ ಕ್ವಾಡ್‌ ಸದಸ್ಯ ರಾಷ್ಟ್ರಗಳ ಕಟು ಸಂದೇಶ

          ಟೋಕಿಯೊ: ಇಂಡೊ-ಪೆಸಿಫಿಕ್‌ ಪ್ರದೇಶವನ್ನು ಮುಕ್ತ ವಲಯವಾಗಿಸುವ ಬದ್ಧತೆಯನ್ನು ಪುನರುಚ್ಚರಿಸಿರುವ ಕ್ವಾಡ್‌ ಸದಸ್ಯ ರಾಷ್ಟ್ರಗಳು, 'ಯಾವುದೇ ದೇಶ ಮತ್ತೊಂದರ ಮೇಲೆ ಪ್ರಾಬಲ್ಯ ಸಾಧಿಸಲು ಯತ್ನಿಸಬಾರದು' ಎಂದು ಚೀನಾಗೆ ಸ್ಪಷ್ಟ ಸಂದೇಶ ರವಾನಿಸಿವೆ.

          'ದೇಶಗಳ ಗಡಿ, ಸಾರ್ವಭೌಮತೆ, ಪ್ರಜಾಪ್ರಭುತ್ವದ ಮೌಲ್ಯ, ಮಾನವ ಹಕ್ಕುಗಳನ್ನು ಗೌರವಿಸುತ್ತಲೇ ಮುಕ್ತ ನಿಯಮ ಆಧರಿಸಿದ ಅಂತರರಾಷ್ಟ್ರೀಯ ಮಾನದಂಡವನ್ನು ಪಾಲಿಸುವ ವಾತಾವರಣದ ನಿರ್ಮಾಣ ಅಗತ್ಯ' ಎಂದು ಕ್ವಾಡ್‌ ರಾಷ್ಟ್ರಗಳ ವಿದೇಶಾಂಗ ಸಚಿವರು ಪ್ರತಿಪಾದಿಸಿದ್ದಾರೆ.

             ಇಲ್ಲಿ ನಡೆದ ಕ್ವಾಡ್‌ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಶೃಂಗಸಭೆಯಲ್ಲಿ ಭಾರತದ ಎಸ್‌. ಜೈಶಂಕರ್‌, ಜಪಾನ್‌ನ ಯೊಕೊ ಕಮಿಕಾವಾ, ಆಸ್ಟ್ರೇಲಿಯಾದ ಪೆನ್ನಿ ವೊಂಗ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಯಂಟನಿ ಬ್ಲಿಂಕೆನ್‌ ಭಾಗವಹಿಸಿದ್ದರು.

             ಚೀನಾದ ಹೆಸರು ನೇರವಾಗಿ ಉಲ್ಲೇಖಿಸದೇ ನಾಲ್ಕೂ ದೇಶಗಳ ವಿದೇಶಾಂಗ ಸಚಿವರು, ಚೀನಾದ ಪೂರ್ವ ಮತ್ತು ದಕ್ಷಿಣ ಸಮುದ್ರ ವಲಯದಲ್ಲಿನ ಪರಿಸ್ಥಿತಿ ಕುರಿತಂತೆ ಕಳವಳ ವ್ಯಕ್ತಪಡಿಸಿದ್ದು, ಜಂಟಿ ಹೇಳಿಕೆಯನ್ನು ನೀಡಿದ್ದಾರೆ.

            ದಕ್ಷಿಣ ಸಮುದ್ರ ವ್ಯಾಪ್ತಿಯಲ್ಲಿ ಚೀನಾ ಕರಾವಳಿ ಕಾವಲು ಪಡೆ, ಹಡಗುಗಳ ನಿಯೋಜನೆ ಹೆಚ್ಚಿಸುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಒತ್ತಾಯ ಅಥವಾ ದಬ್ಬಾಳಿಕೆಯಿಂದ ಈ ವಲಯದಲ್ಲಿ ಈಗಿನ ಸ್ಥಿತಿ ಬದಲಿಸುವ ಯಾವುದೇ ಕಾರ್ಯ ಸಲ್ಲದು' ಎಂದು ಸ್ಪಷ್ಟ ವಿರೋಧವನ್ನು ದಾಖಲಿಸಿದರು.

ಚೀನಾದ ದಕ್ಷಿಣ ಮತ್ತು ಪೂರ್ವ ಸಮುದ್ರ ವಲಯವು ಒಳಗೊಂಡಂತೆ ಹಡಗು ನಿಯೋಜನೆ ಕುರಿತ ಸವಾಲುಗಳನ್ನು ಎದುರಿಸಲು ಅಂತರರಾಷ್ಟ್ರೀಯ ಕಾನೂನು ಮುಖ್ಯವಾಗಿ ಸಮುದ್ರ ನ್ಯಾಯ ಕುರಿತ ವಿಶ್ವಸಂಶ್ಥೆ ಸಮ್ಮೇಳನ ನಿರ್ಣಯದ ಪಾಲನೆ ಅಗತ್ಯ ಎಂದು ಹೇಳಿದರು.

              ಮಾನವರಹಿತ ವೈಮಾನಿಕ ವಾಹಕಗಳು (ಯುಎವಿ), ಡ್ರೋಣ್‌ ಹಾಗೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳನ್ನು ಭಯೋತ್ಪಾದಕರ ಸಂಘಟನೆಗಳು ಬಳಸುವುದನ್ನು ಖಂಡಿಸುತ್ತೇವೆ ಎಂದರು.

                 ಉಗ್ರ ಸಂಘಟನೆಗಳು ಇಂತಹ ಪರಿಕರಗಳ ಬಳಸದಂತೆ ತಡೆಗೆ ಎಲ್ಲ ರಾಷ್ಟ್ರಗಳು ಸುಸ್ಥಿರಾಭಿವೃದ್ಧಿ ಕ್ರಮ ಕೈಗೊಳ್ಳಬೇಕು. ಐಎಸ್‌, ಲಷ್ಕರ್ ಇ ತೊಯಬಾ ಸೇರಿದಂತೆ ವಿಶ್ವಸಂಸ್ಥೆಯು ಪಟ್ಟಿ ಮಾಡಿರುವ ಎಲ್ಲ ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕ್ವಾಡ್‌ ಸಭೆಯು ಒತ್ತಾಯಿಸಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries