ಟೆಹರಾನ್/ದುಬೈ (ರಾಯಿಟರ್ಸ್): ಇರಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಧಾರಣಾವಾದಿ ನಾಯಕ ಮಸೂದ್ ಪೆಜೆಶ್ಕಿಯಾನ್ ಅವರು ಗೆಲುವು ಸಾಧಿಸಿದ್ದಾರೆ ಎಂದು ಒಳಾಡಳಿತ ಸಚಿವಾಲಯ ತಿಳಿಸಿದೆ.
ಶುಕ್ರವಾರ ನಡೆದ ಚುನಾವಣೆಯಲ್ಲಿ 69 ವರ್ಷದ ಪೆಜೆಶ್ಕಿಯಾನ್ ಅವರು ಸಂಪ್ರದಾಯವಾದಿ ಸಯೀದ್ ಜಲೀಲಿ ಅವರನ್ನು ಮಣಿಸಿದ್ದಾರೆ.
ಶೇ 49.8ರಷ್ಟು ಮತದಾನ ನಡೆದಿದ್ದು, 6 ಲಕ್ಷಕ್ಕೂ ಅಧಿಕ ಮತಗಳು ಅಸಿಂಧುವಾಗಿವೆ ಎಂದು ಅವರು ಮಾಹಿತಿ ನೀಡಿದರು.
'ಇರಾನ್‌ನ ಆತ್ಮೀಯ ಜನರೇ, ಚುನಾವಣೆ ಮುಗಿದಿದೆ ಮತ್ತು ನಾವು ಒಟ್ಟಾಗಿ ಕೆಲಸ ಮಾಡುವ ದಿನ ಪ್ರಾರಂಭವಾಗಿದೆ. ಕಠಿಣ ಹಾದಿ ನಮ್ಮ ಮುಂದಿದ್ದು, ನಿಮ್ಮೆಲ್ಲರ ಸಹಕಾರವಿದ್ದರೆ ಮಾತ್ರ ಈ ಹಾದಿ ಸುಗಮವಾಗಿ ಬದಲಾಗಲಿದೆ' ಎಂದು ಗೆಲುವಿನ ಬೆನ್ನಲ್ಲೇ ಪೆಜೆಶ್ಕಿಯಾನ್ ಅವರು 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
'ನಾನು ಎಲ್ಲರತ್ತಲೂ ಸ್ನೇಹದ ಹಸ್ತ ಚಾಚುತ್ತೇನೆ. ನಾನು ನಿಮ್ಮನ್ನು ಅರ್ಧ ಹಾದಿಯಲ್ಲಿ ಕೈಬಿಡುವುದಿಲ್ಲ, ನೀವು ಕೂಡಾ ನನ್ನ ಕೈಬಿಡಬೇಡಿ' ಎಂದು ಜನರಿಗೆ ಮನವಿ ಮಾಡಿದರು.
ಇರಾನ್‌ನ ಅಧ್ಯಕ್ಷರಾಗಿದ್ದ ಇಬ್ರಾಹಿಂ ರೈಸಿ ಅವರು ಮೇ ತಿಂಗಳಲ್ಲಿ ನಡೆದಿದ್ದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಉತ್ತರಾಧಿಕಾರಿಯ ಆಯ್ಕೆಗೆ ಚುನಾವಣೆ ನಡೆದಿದೆ.
ಕಳೆದ ಶುಕ್ರವಾರ (ಜೂನ್ 28) ನಡೆದಿದ್ದ ಮತದಾನದಲ್ಲಿ ಕಣದಲ್ಲಿದ್ದ ನಾಲ್ವರು ಅಭ್ಯರ್ಥಿಗಳಲ್ಲಿ ಯಾರಿಗೂ ಶೇ 50ಕ್ಕಿಂತ ಹೆಚ್ಚು ಮತಗಳು ಲಭಿಸಿರಲಿಲ್ಲ. ಇದರಿಂದ ಮೊದಲ ಎರಡು ಸ್ಥಾನ ಪಡೆದ ಅಭ್ಯರ್ಥಿಗಳಲ್ಲಿ (ಪೆಜೆಶ್ಕಿಯಾನ್ ಮತ್ತು ಜಲೀಲಿ) ಒಬ್ಬರ ಆಯ್ಕೆಗೆ ಒಂದು ವಾರದ ಬಳಿಕ (ಜುಲೈ 5) ಮತ್ತೊಮ್ಮೆ ಮತದಾನ ನಡೆದಿದೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಸೇರಿದಂತೆ ಹಲವು ದೇಶಗಳ ನಾಯಕರು ಪೆಜೆಶ್ಕಿಯಾನ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮಸೂದ್ ಪೆಜೆಶ್ಕಿಯಾನ್ಬದಲಾಗುವುದೇ ವಿದೇಶಾಂಗ ನೀತಿ?
ಪೆಜೆಶ್ಕಿಯಾನ್‌ನ ಅವರ ಗೆಲುವು ಪಾಶ್ಚಿಮಾತ್ಯ ದೇಶಗಳೊಂದಿಗಿನ ಇರಾನ್‌ನ ಸಂಬಂಧ ಉತ್ತಮಗೊಳ್ಳುವ ನಿರೀಕ್ಷೆ ಮೂಡಿಸಿದೆ. ಅದೇ ರೀತಿ ಪರಮಾಣ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅಮೆರಿಕ ಸೇರಿದಂತೆ ಇತರ ದೇಶಗಳ ಜತೆಗಿನ 'ಸಂಘರ್ಷ' ತಣ್ಣಗಾಗುವ ಭರವಸೆ ಮೂಡಿದೆ. ಆದರೆ ಇರಾನ್‌ನ ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇಮಿ ಅವರಿಗೆ ಮಾತ್ರ ಇರುವುದರಿಂದ ಪೆಜೆಶ್ಕಿಯಾನ್ ಅವರಿಂದ ಭಾರಿ ಬದಲಾವಣೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ವಿಶ್ಲೇಷಿಸಲಾಗಿದೆ.