ಇದು ಮಳೆಗಾಲ. ಕೆಲವೆಡೆ ಜೋರು ಮಳೆಯಾದರೆ, ಇನ್ನೂ ಕೆಲವೆಡೆ ಎಡಬಿಡದೆ ಸೋನೆ ಮಳೆ ಸುರಿಯುತ್ತಿದೆ. ಹೊರಗೆ ಹೋಗಲೂ ಆಗದ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆ ಜೊತೆಗೆ ಈ ಮಳೆಗಾಲದಲ್ಲಿ ಹೊರಗೆ ನಿಂತ ನೀರು, ಹುಳು ಹುಪ್ಪಟೆಗಳ ಕಾಟ, ಜೊತೆಗೆ ಎಲ್ಲೆಂದರಲ್ಲಿ ಪಾಚಿ ಕಾಣ ಸಿಗುತ್ತಿದೆ.
ಮಳೆಗಾಲದಲ್ಲಿ ಮೆಟ್ಟಿಲು, ನೆಲ, ನೀರಿನ ಬಾಟಲ್, ಓವರ್ ಹೆಡ್ ಟ್ಯಾಂಕ್ ಎಲ್ಲೆಂದರಲ್ಲಿ ಹಸಿರು ಪಾಚಿ ಕಟ್ಟುವುದು ನಿಜಕ್ಕೂ ಬೇಸರದ ಸಂಗತಿ. ಹೀಗೆ ನೆಲ, ಮೆಟ್ಟಿಲು, ಗೋಡೆಗಳ ಮೇಲೆ ಪಾಚಿ ಕಟ್ಟಿದರೆ ನೋಡಲು ಚೆನ್ನಾಗಿ ಕಾಣುವುದಿಲ್ಲ. ಜೊತೆಗೆ ಜಾರಿ ಬೀಳುವ ಅಪಾಯವೂ ಉಂಟು. ಕ್ಲೀನ್ ಮಾಡಲು ಕಷ್ಟ ಎಂದು ನೀವು ಪಾಚಿಯನ್ನು ಹಾಗೇ ಬಿಟ್ಟರೆ ಮುಂದೆ ಅದು ಎಲ್ಲಾ ಕಡೆ ವ್ಯಾಪಿಸಬಹುದು. ಆದ್ದರಿಂದ ಆದಷ್ಟು ಸಮಯ ಮಾಡಿಕೊಂಡು ಪಾಚಿ ಕಟ್ಟದಂತೆ ಕ್ಲೀನ್ ಮಾಡಿಕೊಳ್ಳಿ.
ಮನೆಯ ಯಾವುದೋ ಒಂದು ಭಾಗದಲ್ಲಿ ಪಾಚಿ ಇದ್ದರೆ ಅದನ್ನು ಬೇಗೆ ತೆಗೆಯಬಹುದು. ಆದರೆ ಬಹಳ ಕಡೆ ಪಾಚಿ ಇದ್ದರೆ ಅದನ್ನು ತೆಗೆಯುವುದು ಕಷ್ಟದ ಕೆಲಸ. ಬ್ಲೀಚ್ ಅಥವಾ ಆಸಿಡ್‌ನಿಂದ ಪಾಚಿ ಕಟ್ಟಿದ ಸ್ಥಳವನ್ನು ಕ್ಲೀನ್ ಮಾಡಿದರೂ ಕೆಲವೊಮ್ಮೆ ರಿಸಲ್ಟ್ ದೊರೆಯುವುದಿಲ್ಲ. ಪಾಚಿಯನ್ನು ತೆಗೆಯಲು ಕೆಲವೊಂದು ಸುಲಭವಾದ ವಿಧಾನಗಳಿವೆ. ಸುಣ್ಣದ ನೀರು, ಪ್ರೆಷರ್ ವಾಶರ್ ಹಾಗೂ ಇನ್ನಿತರ ವಿಧಾನಗಳ ಮೂಲಕ ನೀವು ಸುಲಭವಾಗಿ ಪಾಚಿಯನ್ನು ತೆಗೆಯಬಹುದು.
ಸುಣ್ಣದ ನೀರು
ನಿಮ್ಮ ಮನೆಯ ಸುತ್ತಮುತ್ತ ಬಹಳ ಪಾಚಿ ಕಟ್ಟಿದ್ದರೆ, ಎಲ್ಲೆಲ್ಲಿ ಪಾಚಿ ಇದೆ ಎಂಬುದನ್ನು ನೋಡಿಕೊಂಡು ಅಷ್ಟು ಪ್ರಮಾಣದ ಸುಣ್ಣದ ಚಿಪ್ಪನ್ನು ಒಂದು ಕಬ್ಬಿಣದ ಬಕೆಟ್‌ನಲ್ಲಿ ಸುರಿಯಿರಿ. ( ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಕೆಟ್ ಬೇಡ) ನಂತರ ಅದರ ಎರಡರಷ್ಟು ನೀರನ್ನು ಸುರಿಯಿರಿ. ಸುಣ್ಣದ ಚಿಪ್ಪು, ನೀರಿನೊಂದಿಗೆ ಬೆರೆತ ನಂತರ ಕುದಿಯಲು ಆರಂಭಿಸುತ್ತದೆ. ಈ ವೇಳೆ ಮಕ್ಕಳನ್ನಾಗಲೀ, ನೀವೇ ಆಗಲೀ ಬಕೆಟ್ ಬಳಿ ಹೋಗದೆ ದೂರ ನಿಲ್ಲಿ. ಸುಣ್ಣದ ಕುದಿ ಚರ್ಮಕ್ಕೆ ತಾಕಿದರೆ ಬಹಳ ಅಪಾಯ. ಸುಣ್ಣದ ನೀರು ಕುದಿಯುವುದನ್ನು ನಿಲ್ಲಿಸಿದ ನಂತರ, ಚಪ್ಪಲಿ ಹಾಗೂ ಕೈಗಳಿಗೆ ಗ್ಲೌಸ್ ಧರಿಸಿ, ಒಂದು ದೊಡ್ಡ ಕೋಲಿನ ಸಹಾಯದಿಂದ ತಳದಲ್ಲಿ ನಿಂತಿರುವ ಸುಣ್ಣದ ಗಟ್ಟಿಯನ್ನು ನಿಧಾನವಾಗಿ ತಿರುವಿ. ನಂತರ ಪಾಚಿ ಇರುವ ಜಾಗದಲ್ಲಿ ಬಕೆಟ್‌ನಿಂದಲೇ ( ಕೈ ಹಾಕಬೇಡಿ) ಚೆಲ್ಲಿ, ನಂತರ ಒಂದು ಕಡ್ಡಿ ಪೊರಕೆ ಸಹಾಯದಿಂದ ಸುತ್ತಲೂ ಹರಡಿ. ಸುಣ್ಣದ ನೀರು ಹಾಕಿದ ನಂತರ ಆ ಸ್ಥಳಕ್ಕೆ ಹೋಗಬೇಡಿ, ಮತ್ತೆ ಮಳೆ ಬಂದಾಗ ಅದು ಪಾಚಿ ಸಹಿತ ಹರಿದುಹೋಗುತ್ತದೆ. ಮಳೆ ಬರದಿದ್ದರೆ ಒಂದು ದಿನದ ನಂತರ ನೀವೇ ಪೊರಕೆ ಸಹಾಯದಿಂದ ತೊಳೆದರೆ, ಸುಲಭವಾಗಿ ಪಾಚಿ ಬಿಡುತ್ತದೆ.
ಪ್ರೆಷರ್ ವಾಶರ್
ಪ್ರೆಷರ್ ವಾಶರ್‌ನಿಂದ ಕೂಡಾ ನೀವು ನೆಲದ ಪಾಚಿಯನ್ನು ಸುಲಭವಾಗಿ ತೆಗೆಯಬಹುದು. ಮಾರುಕಟ್ಟೆಯಲ್ಲಿ ಪ್ರೆಷರ್ ವಾಶರ್ ದೊರೆಯುತ್ತದೆ. ಕೆಲವೆಡೆ ಇದು ಬಾಡಿಗೆಗೆ ಕೂಡಾ ದೊರೆಯುತ್ತದೆ. ನಿಮಗೆ ಇದನ್ನು ಉಪಯೋಗಿಸುವುದು ತಿಳಿದಿದ್ದರೆ ಹೆಚ್ಚು ರಿಸ್ಕ್ ಇಲ್ಲದೆ ಪ್ರೆಷರ್ ವಾಶರ್‌ನಿಂದ ಅತಿ ಕಡಿಮೆ ಸಮಯದಲ್ಲಿ ಪಾಚಿಯನ್ನು ತೆಗೆಯಬಹುದು. ಪಾಚಿ ಮಾತ್ರವಲ್ಲದೆ, ಬಹಳ ದಿನಗಳಿಂದ ನೆಲದ ಮೇಲೆ ಅಂಟಿರುವ ಕೊಳೆ, ಗೋಡೆಗಳು, ಟೈಲ್ಸ್ ಮೇಲಿನ ಕೊಳೆ ಕೂಡಾ ಇದರಿಂದ ಕ್ಲೀನ್ ಆಗುತ್ತದೆ.
ವಿನೆಗರ್ ಹಾಗೂ ಬೇಕಿಂಗ್ ಸೋಡಾ
ಮನೆ ಬಳಿ ಸ್ವಲ್ಪ ಪ್ರಮಾಣದಲ್ಲಿ ಪಾಚಿ ಇದ್ದರೆ ಸುಣ್ಣದ ನೀರು ಅಥವಾ ಪ್ರೆಷರ್ ವಾಶರ್ ಬದಲಿಗೆ ನೀವು ವಿನೆಗರ್ ಹಾಗೂ ಬೇಕಿಂಗ್ ಸೋಡಾ ಬಳಸಿ ಸುಲಭವಾಗಿ ಪಾಚಿಯನ್ನು ತೆಗೆಯಬಹುದು. ಪಾಚಿ ಕಟ್ಟಿದ ಜಾಗಕ್ಕೆ ವಿನೆಗರ್ ಹಾಕಿ, ಅದರ ಮೇಲೆ ಬೇಕಿಂಗ್ ಸೋಡಾ, ಪುಡಿ ಉಪ್ಪು ನಂತರ ನಿಂಬೆರಸ ಹಾಕಿ ಒಂದು ವೈಪರ್ ಅಥವಾ ಬೇರೆ ವಸ್ತುವಿನ ಸಹಾಯದಿಂದ ಸುತ್ತಲೂ ಹರಡಿ, 20 ನಿಮಿಷ ಬಿಡಿ. ನಂತರ ಬಿಸಿ ನೀರನ್ನು ಚಿಮುಕಿಸಿ ಬ್ರಷ್ ಸಹಾಯದಿಂದ ಉಜ್ಜಿ ಪಾಚಿಯನ್ನು ಕ್ಲೀನ್ ಮಾಡಿ.
ಬಿಸಿ ನೀರು ಹಾಗೂ ಆಕ್ಸಡೈಸ್ಡ್ ಬ್ಲೀಚ್
ಪಾಚಿ ತೆಗೆಯಲು ನೀವು ಬ್ಲೀಚಿಂಗ್ ಬಳಸುವುದಾದರೆ ಮಾರುಕಟ್ಟೆಯಿಂದ ಆಕ್ಸಡೈಸ್ಡ್ ಬ್ಲೀಚ್ ಕೊಂಡು ತನ್ನಿ, ನೆಲ ಡ್ರೈ ಆಗಿದ್ದಾಗ ಅದರ ಮೇಲೆ ಬ್ಲೀಚ್ ಹರಡಿ, ನಂತರ ಕುದಿಯುವ ನೀರನ್ನು ಬ್ಲೀಚ್ ಮೇಲೆ ಹಾಕಿ ಬಷ್ ಸಹಾಯದಿಂದ ಸುತ್ತಲೂ ಹರಡಿ, ಅರ್ಧ ಗಂಟೆ ಬಿಡಿ. ನಂತರ ಮತ್ತೆ ಬಿಸಿ ನೀರು ಬಳಸಿ ಸುಲಭವಾಗಿ ಪಾಚಿಯನ್ನು ತೆಗೆಯಬಹುದು. ಇದನ್ನು ಹೊರತುಪಡಿಸಿ ಮಾರ್ಕೆಟ್‌ನಲ್ಲಿ ಸುಲಭವಾಗಿ ಪಾಚಿ ತೆಗೆಯುವ ಕೆಲವೊಂದು ಕೆಮಿಕಲ್‌ಗಳು ದೊರೆಯುತ್ತದೆ. ಅದನ್ನು ಜಾಗ್ರತೆಯಿಂದ ಬಳಸಿ ಮಳೆಗಾಲದ ಪಾಚಿ ಸಮಸ್ಯೆಯಿಂದ ಹೊರಬರಬಹುದು.