ಕೊಚ್ಚಿ: ಉಗ್ರ ನಿಗ್ರಹ ಪಡೆ(ಎ.ಟಿ.ಎಸ್)ನಡೆಸಿರುವ ಕ್ಷಿಪ್ರ ಕಾರ್ಯಾಚರಣೆಯಲ್ಲಿ ನಕ್ಸಲ್ ಮುಖಂಡ, ತೃಶ್ಯೂರ್ ಇವನ್ನೂರ್ ಪಡಿಞËರತ್ತಲ ನಿವಾಸಿ ಮನೋಜ್ ಎಂಬಾತನನ್ನು ಎರ್ನಾಕುಳಂ ಸೌತ್ ರೈಲ್ವೆ ನಿಲ್ದಾಣ ಬಳಿ ಬಂಧಿಸಲಾಗಿದೆ. ಈತನ ವಿರುದ್ಧ 14 ಯುಎಪಿಎ ಪ್ರಕರಣಗಳಿದ್ದು, ವಯನಾಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈತನ ವಿರುದ್ಧ ಬಂಧನದ ವಾರಂಟ್ ಜಾರಿಗೊಳಿಸಿದ್ದರು.
ಎರ್ನಾಕುಳಂ ಬ್ರಹ್ಮಪುರಕ್ಕೆ ಆಗಮಿಸಿ, ಅಲ್ಲಿಂದ ತನ್ನ ಕೆಲವು ಸಹಚರರಿಂದ ಹಣ ಪಡೆದು ವಾಪಸಾಗುವ ಮಧ್ಯೆ ಎರ್ನಾಕುಳಂ ರೈಲ್ವೆ ನಿಲ್ದಾಣ ವಠಾರದಿಂದ ಈತನನ್ನು ಸೆರೆಹಿಡಿಯಲಾಗಿದೆ. ಇಂಜಿನಿಯರಿಂಗ್ ಕೋರ್ಸ್‍ಗಾಗಿ ಸೇರ್ಪಡೆಗೊಂಡಿದ್ದ ಈತ, ಶೀಕ್ಷಣ ಅರ್ಧಕ್ಕೆ ಕೈಬಿಟ್ಟು, ನಕ್ಸಲ್ ಗುಂಪಿನ ಜತೆ ಗುರುತಿಸಿಕೊಂಡಿದ್ದನು. ಈತ ಕೇರಳ ಕೇಂದ್ರೀಕರಿಸಿ ಚುಟುವಟಿಕೆ ನಡೆಸುತ್ತಿರುವ ವಯನಾಡ್ ಜಿಲ್ಲೆಯ ತಂಡದ ಜತೆ ಗುರುತಿಸಿಕೊಂಡಿದ್ದನು. ನಕ್ಸಲ್ ತಂಡದಲ್ಲಿ ಗುರುತಿಸಿಕೊಂಡಿದ್ದ ಮನೋಜ್ ಸೇರಿದಂತೆ 20ಮಂದಿಯ ಬಗ್ಗೆ ಮಾಹಿತಿ ನೀಡುವವರಿಗೆ ಪೊಲೀಸರು ಪಾರಿತೋಷಕ ಪ್ರಕಟಿಸಿದ್ದರು. ವಯನಾಡಿನ ಅರಣ್ಯಪ್ರದೇಶದಲ್ಲಿ ಇತ್ತೀಚೆಗೆ ನೆಲಬಾಂಬು ಪತ್ತೆಯಾದ ಘಟನೆ ಬಳಿಕ ನಕ್ಸಲರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಯನ್ನು ಎ.ಟಿ.ಎಸ್ ಚುರುಕುಗೊಳಿಸಿತ್ತು. ಇತ್ತೀಚೆಗೆ ಆರಳಂ ಕೃಷಿ ವಿಭಾಗದಲ್ಲಿ ನಕ್ಸಲ್ ಮುಖಂಡರಾದ, ಮಲಪ್ಪುರಂ ನಿವಾಸಿ ಮೊಯದೀನ್, ತಮಿಳ್ನಾಡಿನ ಸಂತೋಷ್, ವಯನಾಡಿನ ಸೋಮನ್ ಎಂಬವರ ಜತೆ ಮನೋಜ್ ಕೂಡಾ ತಿರುಗಾಡುತ್ತಿದ್ದನೆಂಬ ಮಾಹಿತಿ ಎಟಿಎಸ್‍ಗೆ ಲಭಿಸಿತ್ತು. ನಕ್ಸಲರಿಗೆ ಹಣ, ಆಹಾರ ಸಾಮಗ್ರಿ ಪೂರೈಸುತ್ತಿದ್ದ ಆರೋಪದಲ್ಲಿ ಬಾಬು ಎಂಬಾತನನ್ನು ಎರಡು ತಿಂಗಳ ಹಿಂದೆ ಬಂಧಿಸಲಾಗಿತ್ತು.
ಮನೋಜ್ ಕಳೆದ ನಾಲ್ಕು ತಿಂಗಳಿಂದ ನಾಪತ್ತೆಯಗಿರುವ ಬಗ್ಗೆ ಆತನ ತಾಯಿ ಈ ಹಿಂದೆಯೇ ದೂರು ನೀಡಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿದಾಗ ಮನೋಜ್ ನಕ್ಸಲ್ ತಂಡದ ಜತೆ ಗುರುತಿಸಿಕೊಂಡಿರುವ ಮಾಹಿತಿ ಲಭಿಸಿತ್ತು.