ಕೊಚ್ಚಿ: ಮೂರು ದಿನಗಳಿಂದ ಭಾರೀ ಮಳೆಗೆ ಕೇರಳ ತತ್ತರಿಸಿದೆ. ಭಾರೀ ಮಳೆಗೆ ಮನೆ, ರಸ್ತೆಗಳು ಜಲಾವೃತಗೊಂಡಿದ್ದು, ಮರಗಳು ಉರುಳಿಬಿದ್ದು, ಭೂಕುಸಿತ, ಸಂಚಾರ ಸ್ಥಗಿತ, ವಿದ್ಯುತ್ ವ್ಯತ್ಯಯದಿಂದ ಜನಜೀವನ ದುಸ್ತರವಾಗಿದೆ.
ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಲು ಅವಕಾಶವಿಲ್ಲ ಮತ್ತು ಮೀನಿಗಾರರ ಕುಟುಂಬಗಳು ಸಂಕಷ್ಟದಲ್ಲಿವೆ.
ನಿನ್ನೆ ಸುರಿದ ಮಳೆಗೆ ಇನ್ನೂ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಇಡುಕ್ಕಿ ಮಂಕುಳಂ ತಾಲುಂಗಂಡಂ ನಲ್ಲಿ ಕಾಲುಜಾರಿ ಬಿದ್ದು ಯುವಕ ಮೃತಪಟ್ಟಿದ್ದಾನೆ. ಸುನೀಶ್ ಸುರೇಶ್ (21) ಮೃತ ವ್ಯಕ್ತಿ. ಅಲಪ್ಪುಳ ನಗರದ ಮಟ್ಟಂಚೇರಿ ಸೇತುವೆ ಬಳಿ ಮರ ಬಿದ್ದು ಬೈಕ್ ಸವಾರ ಉನೈಸ್ (30) ಗಾಯಗೊಂಡು ಮೃತಪಟ್ಟಿದ್ದಾರೆ. ಪೂಚಲ್‍ನಲ್ಲಿ ಮನೆ ಕುಸಿದು ಮೂವರು ಗಾಯಗೊಂಡಿದ್ದಾರೆ. ತಿರುವನಂತಪುರಂನ ಕಜಕೂಟಂ ಬಳಿಯ ಮರ್ಯಾನಾಟ್ ಎಂಬಲ್ಲಿ ಬೋಟ್ ಪಲ್ಟಿಯಾಗಿ ಮೀನುಗಾರ ಅಲೋಶಿಯಸ್ ಮೃತಪಟ್ಟಿದ್ದಾರೆ. ಪಾಲಕ್ಕಾಡ್ ಮುಟುಕುಂನಲ್ಲಿ ತೆಂಗಿನಕಾಯಿ ಸಂಗ್ರಹಿಸಲು ನದಿಗೆ ಹೋಗಿ ನಾಪತ್ತೆಯಾಗಿದ್ದ ರಾಜೇಶ್ ಅವರ ಮೃತದೇಹ ನಿನ್ನೆ ಬೆಳಗ್ಗೆ ಪತ್ತೆಯಾಗಿತ್ತು. ಇದರೊಂದಿಗೆ ಎರಡು ದಿನದಲ್ಲಿ ಮಳೆಗೆ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಬಹುತೇಕ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಕೆಲವು ನದಿಗಳು ಉಕ್ಕಿ ಹರಿಯುತ್ತಿದ್ದವು. ನೀರಿನ ಮಟ್ಟ ಏರಿಕೆಯಿಂದಾಗಿ ಈಗಾಗಲೇ 11 ಅಣೆಕಟ್ಟುಗಳನ್ನು ತೆರೆಯಲಾಗಿದೆ.
ಇದೇ ವೇಳೆ ದೋಣಿ ಹಾನಿಗೊಳಗಾಗಿ ಸಮುದ್ರದಲ್ಲಿ ಸಿಲುಕಿದ್ದ 11 ಮಂದಿ ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆ ರಕ್ಷಿಸಿದೆ. ಕೊಚ್ಚಿ ಕರಾವಳಿಯಿಂದ 80 ನಾಟಿಕಲ್ ಮೈಲು ದೂರದಲ್ಲಿ ಯಾಂತ್ರಿಕ ವೈಫಲ್ಯದಿಂದ ದೋಣಿ ಸಿಲುಕಿಕೊಂಡಿದ್ದನ್ನು ಕೋಸ್ಟ್ ಗಾರ್ಡ್ ಗಸ್ತು ತಂಡವು ಕಣ್ಗಾವಲಿನಲ್ಲಿ ಗಮನಿಸಿದೆ. ತಂಡವು ದೋಣಿಯ ಬಳಿಗೆ ಬಂದು ಅವರನ್ನು ದೋಣಿಯಿಂದ ಹಡಗಿಗೆ ಸ್ಥಳಾಂತರಿಸಿತು. ನಂತರ ಹೆಲಿಕಾಪ್ಟರ್ ಮೂಲಕ ಕೊಚ್ಚಿಗೆ ಕರೆತರಲಾಯಿತು. ಮಳೆ, ಗಾಳಿಗೆ ಭಾರಿ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಕೇರಳ ಕರಾವಳಿಯಲ್ಲಿ 55 ಕಿ.ಮೀ. ಜೋರಾಗಿ ಗಾಳಿ ಬೀಸುವ ಸಾಧ್ಯತೆಯೂ ಇದೆ.
ಕೆಎಸ್‍ಇಬಿಯ ನಾಲ್ಕು ಅಣೆಕಟ್ಟುಗಳು ಮತ್ತು ನೀರಾವರಿ ಇಲಾಖೆಯ ಏಳು ಅಣೆಕಟ್ಟುಗಳು ತೆರೆದಿವೆ. ಪೆಪ್ಪಾರ, ಕಂಜಿರಪುಳ, ಪಝಸ್ಸಿ, ಮಲಂಕರ, ಭೂತತಾನ್, ಅರುವಿಕರ, ಮಂಗಳಂ, ಪೆರಿಂಗಲ್ಕುತ್, ಕಲ್ಲರ್ಕುಟ್ಟಿ, ಪಾಂಬ್ಲಾ ಮತ್ತು ಕಕ್ಕಡ್ ಜಲಾಶಯಗಳನ್ನು ತೆರೆಯಲಾಗಿದೆ.