ಜೈಪುರ: ಝುಂಝುನೂನಲ್ಲಿರುವ ಲೋಹರ್ಗಲ್ ಧಾಮದಲ್ಲಿ ಮಹಿಳೆಯರಿಗೆ ಮೀಸಲಿದ್ದ ಪುಷ್ಕರಣಿಯಲ್ಲಿ ಪುರುಷರು ತೀರ್ಥಸ್ನಾನ ಮಾಡಲು ಮುಂದಾದ ಕಾರಣ ಪೊಲೀಸರು ಯಾತ್ರಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಿದರು.
ಜೈಪುರ: ಝುಂಝುನೂನಲ್ಲಿರುವ ಲೋಹರ್ಗಲ್ ಧಾಮದಲ್ಲಿ ಮಹಿಳೆಯರಿಗೆ ಮೀಸಲಿದ್ದ ಪುಷ್ಕರಣಿಯಲ್ಲಿ ಪುರುಷರು ತೀರ್ಥಸ್ನಾನ ಮಾಡಲು ಮುಂದಾದ ಕಾರಣ ಪೊಲೀಸರು ಯಾತ್ರಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಿದರು.
ಲೋಹರ್ಗಲ್ ಧಾಮದಲ್ಲಿ ಸೂರ್ಯ, ಶಿವ, ಹನುಮಾನ್ ದೇಗುಲ ಮತ್ತು ಪಾಂಡವ ಗುಹೆ ಇದೆ.
ಇಲ್ಲಿ ತೀರ್ಥಸ್ನಾನ ಮಾಡಲು ಸೋಮವಾರ ಮುಂಜಾನೆಯೇ ಅಪಾರ ಯಾತ್ರಾರ್ಥಿಗಳು ನೆರೆದಿದ್ದರು. ಮಹಿಳೆಯರಿಗಿಂತ ಪುರುಷರೇ ಹೆಚ್ಚಿದ್ದರು. ಈ ಸಂದರ್ಭದಲ್ಲಿ ಕೆಲ ಯುವಕರು ಮಹಿಳೆಯರಿಗೆ ಮೀಸಲಿದ್ದ ಕಲ್ಯಾಣಿಯಲ್ಲಿ ತೀರ್ಥಸ್ನಾನ ಮಾಡಲು ಮುಂದಾದರು. ಈ ವೇಳೆ ಗದ್ದಲ ಉಂಟಾಯಿತು, ಪುರುಷರನ್ನು ತಡೆಯಲು ಪೊಲೀಸರು ಲಾಠಿಚಾರ್ಜ್ ನಡೆಸಿದರು.
ಭಕ್ತಸಮೂಹವನ್ನು ನಿಭಾಯಿಸುವಷ್ಟು ಪೊಲೀಸ್ ಸಿಬ್ಬಂದಿ ಇರದ ಕಾರಣ ಪರಿಸ್ಥಿತಿಯು ಮತ್ತಷ್ಟು ಬಿಗಡಾಯಿಸಿತು ಎಂದು ವರದಿಗಳು ಹೇಳಿವೆ.
ಅಂಗಡಿಗಳು ಧ್ವಂಸ:
ಪೊಲೀಸರು ಲಾಠಿಚಾರ್ಜ್ ಮಾಡುತ್ತಿದ್ದಂತೆಯೇ ಉದ್ರಿಕ್ತ ಯಾತ್ರಾರ್ಥಿಗಳ ಗುಂಪು ಧಾಮದ ಸಮೀಪದ ಅಂಗಡಿಗಳನ್ನು ಧ್ವಂಸ ಮಾಡಿತು, ವಾಹನಗಳನ್ನು ಜಖಂಗೊಳಿಸಿತು. ಪೊಲೀಸರು ಮತ್ತು ಉದ್ರಿಕ್ತ ಯಾತ್ರಾರ್ಥಿಗಳು ಕೈಕೈಮಿಲಾಯಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಆದರೆ ಸ್ಥಳದಲ್ಲಿ ಲಾಠಿಚಾರ್ಜ್ ನಡೆಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸಣ್ಣ ಪೊಲೀಸ್ ಪಡೆ ಬಳಸಿ ಯಾತ್ರಾರ್ಥಿಗಳಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಸಲಾಯಿತು ಎಂದು ತಿಳಿಸಿದ್ದಾರೆ.