ಕೋಝಿಕ್ಕೋಡ್: ಭಾರೀ ಮಳೆಗೆ ಬಾವಿಯೊಂದು ಕುಸಿದಿದೆ. ಕೋಝಿಕ್ಕೋಡ್‍ನ ಕರಸ್ಸೆರಿ ಪಂಚಾಯತ್‍ನಲ್ಲಿರುವ ವಡಿಸ್ಸೆರಿ ಬಾಲಕೃಷ್ಣನ್ ಅವರ ಮನೆಯ ಬಾವಿಯು ನೋಡನೋಡುತ್ತಿರುವಂತೆ ಭೂಗತವಾಯಿತು.
ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ದೊಡ್ಡ ಶಬ್ದ ಕೇಳಿ ಮನೆಯವರು ಓಡಿ ಬರುವಷ್ಟರಲ್ಲಿ ಬಾವಿ ನಾಪತ್ತೆಯಾಗಿತ್ತು.
ಕಳೆದ ವರ್ಷ ನಿರ್ಮಿಸಿದ ಬಾವಿ ಕುಸಿದಿದೆ. ಬಾವಿಯ ಅಂಚಿನಿಂದ ಸುಮಾರು 500 ಮೀಟರ್ ದೂರದಲ್ಲಿ ಎರಡು ಕವಲುಗಳಾಗಿ ಹೊಳೆಯ ರೂಪದಲ್ಲಿ ನೀರು ಹರಿದು ಹೋಗಿದೆ. ಹಲವೆಡೆ ಸುರಿದ ಮಳೆಯಿಂದಾಗಿ ಬಾವಿಯ ಆಸುಪಾಸಿನಲ್ಲಿ ನೀರು ನಿಂತಿತ್ತು. ಆದರೆ ಬಾವಿ ಕುಸಿಯುತ್ತದೆ ಎಂದು ಭಾವಿಸಿರಲಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ.
20 ಕೋಲು ಆಳದ ಬಾವಿ ಸಂಪೂರ್ಣ ಕುಸಿದಿದೆ. ಪಕ್ಕದಲ್ಲಿ ಅಳವಡಿಸಿದ್ದ ಮೋಟಾರ್ ಕೂಡ ನಾಶವಾಗಿದೆ. ದಕ್ಷಿಣ ಕಾರಸ್ಸೆರಿ 15ನೇ ವಾರ್ಡ್ ಸದಸ್ಯೆ ರುಕಿಯಾ ಮನೆ ಇರುವ ಸ್ಥಳಕ್ಕೆ ಭೇಟಿ ನೀಡಿದರು. ಗ್ರಾಮ ಕಚೇರಿ ಅಧಿಕಾರಿಗಳೂ ಭೇಟಿ ನೀಡಿದ್ದಾರೆ.