ಕುಂಬಳೆ: ಕುಂಬಳೆ ಸನಿಹದ ಭಾಸ್ಕರ ನಗರದಲ್ಲಿ ಕಾರು ಪ್ರಯಾಣಿಕರ ತಂಗುದಾಣ ಕಟ್ಟಡಕ್ಕೆ ಡಿಕ್ಕಿಯಾಗಿ ಮಗುಚಿಬಿದ್ದಿದೆ. ಕಾರಿಗೆ ಹಾಗೂ ಪ್ರಯಾಣಿಕರ ತಂಗುದಾಣ ಕಟ್ಟಡಕ್ಕೆ ಹಾನಿಯಾಘಿದ್ದು, ಕಾರಿನಲ್ಲಿದ್ದವರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಮಧೂರು ಕೋಟೆಕಣಿ ನಿವಾಸಿಗಳಾದ ಅಬ್ದುಲ್ ಕಲಂದರ್, ಆರಿಫ್, ಸಜ್ಮಲ್ ಪಾರಾದವರು. ಪ್ರತಿ ದಿನ ಸಂಜೆ ವೇಳೆ ತಂಗುದಾಣದಲ್ಲಿ ಆಸುಪಾಸಿನ ಕೆಲವು ಹಿರಿಯರು ಬಂದು ಮಾತುಕತೆ ನಡೆಸುತ್ತಿದ್ದು, ಮಂಗಳವಾರ ಬಿರುಸಿನ ಮಳೆಯಾದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ ನಿರ್ಜನವಾಗಿತ್ತು. ಕುಂಬಳೆ ಠಾಣೆ ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಇದೇ ಜಾಗದಲ್ಲಿ ಈ ಹಿಂದೆ ಎಂಟಕ್ಕೂ ಹೆಚ್ಚು ಅಪಘಾತ ನಡೆದಿರುವುದಾಗಿ ಸ್ಥಳೀಯರು ತಿಳಿಸುತ್ತಾರೆ.