ಪೆರ್ಲ: ತಾಂತ್ರಿಕ ಶಿಕ್ಷಣದಲ್ಲಿನ ಅವಿಷ್ಕಾರಗಳು ಇಂದಿನ ವಿದ್ಯಾಬ್ಯಾಸ ವ್ಯವಸ್ಥೆಯಲ್ಲಿ ಮಹತ್ವದ ಅಭಿವೃದ್ಧಿಗೆ ಸಹಾಯಕವಾಗಿರುವುದಾಗಿ ಕಾಸರಗೋಡು ಜಿಲ್ಲಾ ಕೈಟ್ ಕೋರ್ಡಿನೇಟರ್ ರೋಜಿ ಜೋಸೆಫ್ ತಿಳಿಸಿದ್ದಾರೆ.
ಅವರು ಪೆರ್ಲ ಶ್ರೀ ಸತ್ಯನಾರಾಯಣ ವಿದ್ಯಾಸಂಸ್ಥೆಯ ನವೀಕೃತ ಕಂಪ್ಯೂಟರ್ ಲ್ಯಾಬ್‍ನ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾಸರಗೋಡು ಜಿಲ್ಲೆಯ ಅನುದಾನಿತ ಶಾಲಾ ವಿಭಾಗದಲ್ಲಿ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಕೊಡುಗೆಯಗಿ ನೀಡಿರುವ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು. ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಎಸ್. ಸೋಮಶೇಖರ ನವೀಕೃತ ಲ್ಯಾಬ್ ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನ ಬಹಳಷ್ಟು ಮುಂದುವರಿದಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು. ಎಳವೆಯಿಂದಲೇ ಕಂಪ್ಯೂಟರ್ ಶಿಕ್ಷಣದ ಜ್ಞಾನ ಪಡೆದುಕೊಳ್ಳುವ ಮೂಲಕ ತಂತ್ರಜ್ಞಾನದ ಆವಿಷ್ಕಾರದೊಂದಿಗೆ ಹೆಜ್ಜೆಹಾಕಲು ತಯಾರಾಗಬೇಕು ಎಂದು ತಿಳಿಸಿದರು. ಶ್ರೀ ವಿದ್ಯಾರಣ್ಯ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಜಿ ರಾಮಭಟ್ ಅಧ್ಯಕ್ಷತೆ ವಹಿಸಿದ್ದರು.
ಎಣ್ಮಕಜೆ ಗ್ರಾಪಂ ಉಪಾಧ್ಯಕ್ಷೆ ರಮ್ಲಾ ಇಬ್ರಾಹಿಂ, ಶ್ರೀ ಸತ್ಯನಾರಾಯಣ ವಿದ್ಯಾಸಂಸ್ಥೆ ಉಪಾಧ್ಯಕ್ಷರಾದ ಸದಾಶಿವ ಭಟ್ ಹರಿನಿಲಯ, ವೆಂಕಟ್ರಾಜ ಮಿತ್ರ, ಶಾಲಾ ಆಡಳಿತ ಮಂಡಳಿ ಸದಸ್ಯ ಬಿ.ಎಸ್. ಗಾಂಭಿರ, ಶಾಲಾ ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಾರಾಮ ಬಾಳಿಗ ಪೆರ್ಲ, ಶಾಲಾ ಮುಖ್ಯ ಶಿಕ್ಷಕ ಕೇಶವ ಪ್ರಕಾಶ್ ಎನ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಪೆರ್ಲ ಉಪಸ್ಥಿತರಿದ್ದರು. ಈ ಸಂದರ್ಭ ಜಿಲ್ಲಾಡಳಿತ ಹಾಗೂ ಪಿಆರ್‍ಡಿ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ವಾಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಶಾಲಾ ವಿದ್ಯಾರ್ಥಿನಿ ವಿಸ್ಮಿತಾ ಡಿ. ಅವರನ್ನು ಗೌರವಿಸಲಾಯಿತು. ನಿವೃತ್ತ ಶಿಕ್ಷಕರು, ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು, ಊರ ಪ್ರಮುಖರು ಪಾಲ್ಗೊಂಡಿದ್ದರು. ಶಿಕ್ಷಕರಾದ ವೇಣುಗೋಪಾಲ್ ಸ್ವಾಗತಿಸಿದರು. ಅಕ್ಷತಾ ಟೀಚರ್ ಹಾಗೂ ಉದಯಶಂಕರ್ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣರಾಜ ಮಾಸ್ಟರ್ ವಂದಿಸಿದರು.