ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನವು ಸೋಮವಾರದಿಂದ (ಜುಲೈ 22) ಆರಂಭಗೊಳ್ಳಲಿದೆ. ಮಂಗಳವಾರದಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ಬಜೆಟ್ ಮಂಡಿಸಲಿದ್ದಾರೆ. ಇದೇ ವೇಳೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ರೈಲ್ವೆ ಸುರಕ್ಷತೆಯ ವಿಷಯಗಳ ಸಂಬಂಧ ಕೇಂದ್ರ ಸರ್ಕಾರವನ್ನು ಕಟ್ಟಿಹಾಕಲು ವಿರೋಧ ಪಕ್ಷಗಳು ನಿಶ್ಚಯಿಸಿವೆ.
ಸಚಿವೆ ನಿರ್ಮಲಾ ಸೀತಾರಾಮ್ ಅವರು ಸೋಮವಾರ ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಈ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಒಟ್ಟು ಆರು ಮಸೂದೆಗಳನ್ನು ಮಂಡಿಸಬಹುದು ಎಂದು ನಿರೀಕ್ಷಿಸಲಾಗಿದೆ. ಜುಲೈ 22ರಂದು ಆರಂಭವಾಗುವ ಮಳೆಗಾಲದ ಅಧಿವೇಶನವು ಆಗಸ್ಟ್ 12ರವರೆಗೆ ನಡೆಯಲಿದೆ.
ವಿರೋಧ ಪಕ್ಷಗಳು ಯಾವ ವಿಷಯಗಳ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಸಲು ಬಯಸುತ್ತಿದೆ ಎಂಬುದನ್ನು ತಿಳಿಯಲು ಆಯಾ ಪಕ್ಷಗಳ ಸದನ ನಾಯಕನೊಂದಿದೆ ಸಂಸತ್ತು ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸಭೆ ನಡೆಸಿದ್ದಾರೆ. ಸಂಸತ್ತಿನ ಅಜೆಂಡಾವನ್ನು ನಿರ್ಧರಿಸಲು ವಿವಿಧ ಪಕ್ಷಗಳ 14 ಸಂಸದರನ್ನು ಒಳಗೊಂಡ ವ್ಯವಹಾರ ಸಲಹಾ ಸಮಿತಿಯೊಂದನ್ನು (ಬಿಎಸಿ) ಸ್ಪೀಕರ್ ಓಂ ಬಿರ್ಲಾ ರಚಿಸಿದ್ದಾರೆ.