ಅಹಮದಾಬಾದ್: ಗುಜರಾತ್‌ನ ಕೇಂದ್ರ ಮತ್ತು ದಕ್ಷಿಣ ಭಾಗಗಳಲ್ಲಿ ಬುಧವಾರ ಧಾರಾಕಾರ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ಸೃಷ್ಟಿಯಾಗಿದೆ.
ಹಲವು ನದಿಗಳು ಮತ್ತು ಜಲಾಶಯಗಳಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.
ಬುಧವಾರ ಬೆಳಿಗ್ಗೆಯಿಂದಲೇ ಗುಜರಾತ್‌ನ ಸೂರತ್, ಭರೂಚ್ ಮತ್ತು ಆನಂದ್ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಹೀಗಾಗಿ, ಕೆಲವೆಡೆ ಶಾಲಾ ಮತ್ತು ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ. ಕೆಲವು ಕಡೆಗಳಲ್ಲಿ ರೈಲು ಸೇವೆಗಳಲ್ಲೂ ವ್ಯತ್ಯಯವಾಗಿದೆ.
ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಕರೆತರಲು ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) , ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಹಾಗೂ ಸ್ಥಳೀಯ ಅಗ್ನಿಶಾಮಕ ದಳದ ತಂಡಗಳನ್ನು ನಿಯೋಜಿಸಲಾಗಿದೆ.
ಆನಂದ್ ಜಿಲ್ಲೆಯ ಬೊರ್ಸಾದ್ ತಾಲ್ಲೂಕಿನಲ್ಲಿ ಬೆಳಿಗ್ಗೆ 8 ಗಂಟೆಯಿಂದ ನಾಲ್ಕು ಗಂಟೆಗಳಲ್ಲಿ 314 ಮಿಲಿ ಮೀಟರ್‌ನಷ್ಟು ಮಳೆ ಸುರಿದಿರುವುದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ (ಎಸ್‌ಇಒಸಿ) ದತ್ತಾಂಶದಲ್ಲಿ ದಾಖಲಾಗಿದೆ. ಈ ಭಾಗದ ತಗ್ಗು ಪ್ರದೇಶಗಳಲ್ಲಿದ್ದು ಸುಮಾರು 400 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ಕು ರೈಲುಗಳ ಸಂಚಾರ ರದ್ದು: ವಡೋದರಾ ವಿಭಾಗದಲ್ಲಿ ರೈಲ್ವೆ ಮೇಲ್ಸೇತುವೆ ಮೇಲೆ ನೀರಿನ ಮಟ್ಟ ಹೆಚ್ಚಾಗಿದ್ದ ಕಾರಣ 11 ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ತಡೆ ಹಿಡಿಯಲಾಗಿತ್ತು. ನಾಲ್ಕು ಸ್ಥಳೀಯ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಯಿತು. ಬಳಿಕ ನೀರಿನ ಮಟ್ಟ ನಿಯಂತ್ರಣಕ್ಕೆ ಬಂದ ಬಳಿಕ ರೈಲು ಸಂಚಾರವನ್ನು ಆರಂಭಿಸಲಾಯಿತು ಎಂದು ಪಶ್ಚಿಮ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕೊಲ್ಹಾಪುರ: 81 ಅಣೆಕಟ್ಟು ಮುಳುಗಡೆ
ಪುಣೆ: ಪಶ್ಚಿಮ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಪಂಚಗಂಗಾ ನದಿಯು ಅಪಾಯದ ಮಟ್ಟ ಮೀರಲು ಕೆಲವು ಇಂಚುಗಳು ಮಾತ್ರ ಬಾಕಿ ಇದೆ. ಪಂಚಗಂಗಾ ನದಿಯಲ್ಲಿ 42.2 ಅಡಿ ಎತ್ತರದಲ್ಲಿ ನೀರು ಹರಿಯುತ್ತಿದ್ದು ಅಪಾಯದ ಮಟ್ಟ ಎಂದು ಪರಿಗಣಿಸಲಾಗಿರುವ 43 ಅಡಿ ತಲುಪಲು ಕೇವಲ ಎಂಟು ಇಂಚು ಬಾಕಿ ಇದೆ. ಅಲ್ಲದೆ 7.71 ಟಿಎಂಸಿಯಷ್ಟು ನೀರು ಶೇಖರಿಸಬಹುದಾದ ರಾಧಾನಗರಿ ಜಲಾಶಯವು ಶೇ 90ರಷ್ಟು ಭರ್ತಿಯಾಗಿದ್ದು 1500 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವ ಕಾರಣ 81 ಅಣೆಕಟ್ಟುಗಳು ಮುಳುಗಡೆಯಾಗಿವೆ. ಕೃಷ್ಣ ನದಿ ತೀರದ ಪ್ರದೇಶಗಳಲ್ಲಿ ಅಗತ್ಯವಿರುವಷ್ಟು ಮಳೆಯಾಗಿದ್ದು ಉತ್ತರ ಕರ್ನಾಟಕದ ಆಲಮಟ್ಟಿ ಜಲಾಶಯಕ್ಕೆ ನೀರಿನ ಹರಿಯುವಿಕೆ ಹೆಚ್ಚಳವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪುಣೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ. ಪುಣೆಯ ಕೆಲವು ಭಾಗಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದಿರುವ ಭಾರತೀಯ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.