ಚೆನ್ನೈ: ತಮಿಳುನಾಡಿನ ಬಹುಕೋಟಿ ಗುಟ್ಕಾ ಹಗರಣದ ಪ್ರಕರಣವನ್ನು ಸಿಬಿಐ ವಿಶೇಷ ನ್ಯಾಯಾಲಯವು ಇಲ್ಲಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿ, ಆದೇಶ ಪ್ರಕಟಿಸಿದೆ.
ಎಐಎಡಿಎಂಕೆ ಮಾಜಿ ಸಚಿವರಾದ ಸಿ. ವಿಜಯಭಾಸ್ಕರ್ ಮತ್ತು ಬಿ.ವಿ ರಮಣ ಸೇರಿದಂತೆ ಇತರರನ್ನು ಪ್ರಮುಖ ಆರೋಪಿಗಳೆಂದು ಈ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.
ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಜಿಲ್ ವಳವನ್ ಅವರು ಈ ಪ್ರಕರಣವನ್ನು ಇಲ್ಲಿನ ಜನಪತ್ರಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿದರು.
ಈ ಪ್ರಕರಣದಲ್ಲಿ ಮಾಜಿ ಆರೋಗ್ಯ ಸಚಿವ ವಿಜಯಭಾಸ್ಕರ್, ಮಾಜಿ ವಾಣಿಜ್ಯ ತೆರಿಗೆ ಸಚಿವ ರಮಣ, ನಿವೃತ್ತ ಐಪಿಎಸ್ ಅಧಿಕಾರಿಗಳಾದ ಟಿ.ಕೆ ರಾಜೇಂದ್ರನ್, ಎಸ್ ಜಾರ್ಜ್ ಸೇರಿದಂತೆ 17 ಮಂದಿ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
2017ರಲ್ಲಿ ಚೆನ್ನೈನ ಉಪನಗರದ ಗೋದಾಮಿನ ಮೇಲೆ ನಗರ ಪೊಲೀಸರು ನಡೆಸಿದ ಹಠಾತ್ ದಾಳಿಯಿಂದಾಗಿ ಗುಟ್ಕಾ ಅಕ್ರಮ ದಾಸ್ತಾನು ಮತ್ತು ಮಾರಾಟವನ್ನು ಪತ್ತೆಹಚ್ಚಿದ ನಂತರ ತಮಿಳುನಾಡಿನಲ್ಲಿ ಗುಟ್ಕಾ ಹಗರಣ ಬೆಳಕಿಗೆ ಬಂದಿತು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು.