ಕೀವ್: ರಷ್ಯಾದ ಕ್ಷಿಪಣಿಗಳು ದಕ್ಷಿಣದ ಉಕ್ರೇನ್‌ನ ಪಟ್ಟಣವೊಂದಕ್ಕೆ ಅಪ್ಪಳಿಸಿದ ಪರಿಣಾಮ ಮಕ್ಕಳು ಸೇರಿದಂತೆ ಏಳು ನಾಗರಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರ ದೇಹಗಳನ್ನು ವಿಲ್ನಿಯಾನ್‌ಸ್ಕ್ ನಗರದಲ್ಲಿರುವ ಉದ್ಯಾನವನದಲ್ಲಿಡಲಾದ ಫೋಟೊಗಳನ್ನು ಉಕ್ರೇನ್ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ಝಪೊರಿಝಿಯಾ ಪ್ರಾಂತ್ಯದ ವಿಲ್ನಿಯಾನ್‌ಸ್ಕ್ ನಗರವು ಸ್ಥಳೀಯ ರಾಜಧಾನಿಯಿಂದ ಸುಮಾರು 30 ಕಿ.ಮೀ ದೂರದಲ್ಲಿದ್ದು, ಈ ಪ್ರಾಂತ್ಯವನ್ನು ವಶಕ್ಕೆ ಪಡೆಯಲು ರಷ್ಯಾದ ಪಡೆಗಳು ನಿರಂತರ ಯತ್ನ ನಡೆಸುತ್ತಿದೆ. ಇದರ ಭಾಗವಾಗಿ ಶನಿವಾರ ನಡೆದ ದಾಳಿಯಲ್ಲಿ ಮೂವರು ಮಕ್ಕಳು ಸೇರಿ ಏಳು ಜನ ಮೃತಪಟ್ಟಿದ್ದಾರೆ. 36 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಯುದ್ಧ ಮುಂದುವರಿಸಲು ಉಕ್ರೇನ್‌ಗೆ ಸಂಪನ್ಮೂಲ ಕ್ರೋಡೀಕರಣ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಮಾಡಲು ರಷ್ಯಾ, ಇಂಧನ ಮತ್ತು ಇನ್ನಿತರ ಮೂಲಭೂತ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ.
ಉಕ್ರೇನ್‌ನ ಮತ್ತೆರಡು ಗ್ರಾಮಗಳು ರಷ್ಯಾ ವಶಕ್ಕೆ
ಉಕ್ರೇನ್‌ನ ಪೂರ್ವಭಾಗದ ಮತ್ತೆರಡು ಗ್ರಾಮಗಳು ತಮ್ಮ ವಶವಾಗಿವೆ ಎಂದು ರಷ್ಯಾ ಪ್ರತಿಪಾದಿಸಿಕೊಂಡಿದೆ. ಈ ಎರಡು ಗ್ರಾಮಗಳಿಗಾಗಿ ಉಭಯ ರಾಷ್ಟ್ರಗಳ ನಡುವೆ ಹಲವು ತಿಂಗಳುಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾ ಮೇಲುಗೈ ಸಾಧಿಸಿದ್ದು ಈ ಗ್ರಾಮಗಳನ್ನು ಉಳಿಸಿಕೊಳ್ಳುವ ಯತ್ನದಲ್ಲಿ ಉಕ್ರೇನ್ ಹಿನ್ನಡೆ ಅನುಭವಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ರಷ್ಯಾದ ರಕ್ಷಣಾ ಸಚಿವಾಲಯ 'ಡೊನೆಟ್‌ಸ್ಕ್ ಪ್ರಾಂತ್ಯದಲ್ಲಿ ಉಕ್ರೇನ್‌ನ ಸೇನೆಯನ್ನು ರಷ್ಯಾ ಸೇನೆ ಹಿಮ್ಮೆಟ್ಟಿಸಿದೆ. ಇದೀಗ ನವೂಲೇಕ್‌ಸ್ಯಾನ್‌ಡ್ರೈವ್‌ಸ್ಕಾ ಪ್ರದೇಶವು ಸ್ವತಂತ್ರವಾಗಿದೆ' ಎಂದು ಹೇಳಿದೆ.