HEALTH TIPS

'ನೀಟ್‌-ಯುಜಿ' ರದ್ದುಪಡಿಸುವುದು ತರ್ಕಬದ್ಧವಲ್ಲ: ಕೇಂದ್ರ

          ವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೇ 5ರಂದು ನಡೆದಿದ್ದ 'ನೀಟ್‌-ಯುಜಿ' ಪರೀಕ್ಷೆಯನ್ನು ರದ್ದುಪಡಿಸಿ, ಮರು ಪರೀಕ್ಷೆ ನಡೆಸುವುದು ತರ್ಕಬದ್ಧ ಕ್ರಮವಲ್ಲ. ಒಂದು ವೇಳೆ ಹಾಗೆ ಮಾಡಿದರೆ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರುವ ಲಕ್ಷಾಂತರ ಅಭ್ಯರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ತಿಳಿಸಿವೆ.

           ಕೆಲ ಅಭ್ಯರ್ಥಿಗಳು, ಕೋಚಿಂಗ್‌ ಸಂಸ್ಥೆಗಳು ಮತ್ತು ನೀಟ್‌-ಯುಜಿ ಆಕಾಂಕ್ಷಿಗಳ ಕೆಲ ಪೋಷಕರು ಸಲ್ಲಿಸಿರುವ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ಎನ್‌ಟಿಎ ಪ್ರತ್ಯೇಕವಾಗಿ ಅಫಿಡವಿಟ್‌ ಸಲ್ಲಿಸಿವೆ. ನೀಟ್‌ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿರುವ ಮನವಿಗಳಿಗೆ ಸಚಿವಾಲಯ ಮತ್ತು ಎನ್‌ಟಿಎ ವಿರೋಧ ದಾಖಲಿಸಿವೆ.

            'ಅಖಿಲ ಭಾರತ ಮಟ್ಟದ ಪರೀಕ್ಷೆಯಲ್ಲಿ ದೊಡ್ಡ ಪ್ರಮಾಣದ ಗೋಪ್ಯತೆ ಉಲ್ಲಂಘನೆ ಆಗಿರುವ ಕುರಿತು ಯಾವುದೇ ಪುರಾವೆಗಳಿಲ್ಲದೆ, ಸಂಪೂರ್ಣ ಪರೀಕ್ಷೆಯನ್ನು ಮತ್ತು ಈಗಾಗಲೇ ಘೋಷಿಸಲಾದ ಫಲಿತಾಂಶಗಳನ್ನು ರದ್ದುಗೊಳಿಸುವುದು ತರ್ಕಬದ್ಧವಲ್ಲ' ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.

ಪ್ರಾಮಾಣಿಕ ಅಭ್ಯರ್ಥಿಗಳ ಹಿತಕಾಯಬೇಕಿದೆ:

             ಪರೀಕ್ಷೆಯಲ್ಲಿ ಯಾವುದೇ ಅನ್ಯಾಯದ ವಿಧಾನಗಳನ್ನು ಅನುಸರಿಸದೆ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ಹಿತಾಸಕ್ತಿ ಕಾಯಬೇಕಿದ್ದು, ಅವರ ಹಕ್ಕುಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಿದೆ. ಅಂತಹ ಲಕ್ಷಾಂತರ ಅಭ್ಯರ್ಥಿಗಳ ಹಿತಾಸಕ್ತಿಯನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ. ‌

          ಯಾವುದೇ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಗೋಪ್ಯತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕೆಲ ಅಪರಾಧಗಳಿಂದ ಗೋಪ್ಯತೆ ಉಲ್ಲಂಘನೆಯಾಗಿದ್ದರೆ, ಅಂತಹ ವ್ಯಕ್ತಿಯನ್ನು ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಗುರಿಪಡಿಸಬೇಕಿದೆ ಎಂದು ಅದು ತಿಳಿಸಿದೆ.

              ಯಾವುದೇ ಬಲವಾದ ಆಧಾರವಿಲ್ಲದೆ, ಕೇವಲ ಊಹೆಗಳ ಆಧಾರದ ಮೇಲೆ ಸಲ್ಲಿಕೆಯಾಗಿರುವ ಮನವಿಗಳನ್ನು ತಿರಸ್ಕರಿಸಬೇಕು. ಈ ಮೂಲಕ ಪ್ರಾಮಾಣಿಕ ಪರೀಕ್ಷಾರ್ಥಿಗಳು ಮತ್ತು ಅವರ ಕುಟುಂಬದವರಿಗೆ ಅನಗತ್ಯ ನೋವು ಮತ್ತು ಸಂಕಟ ಆಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.

ಸಿಬಿಐ ತನಿಖೆ ಪ್ರಗತಿಯಲ್ಲಿದೆ:

            'ನೀಟ್‌-ಯುಜಿ'ಯಲ್ಲಿನ ಪರೀಕ್ಷಾ ಅಕ್ರಮ, ವಂಚನೆ, ನಕಲಿ ಅಭ್ಯರ್ಥಿ... ಸೇರಿದಂತೆ ವಿವಿಧ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಅದು 2024ರ ಜೂನ್‌ 23ರಂದು ಪ್ರಕರಣ ದಾಖಲಿಸಿದ್ದು, ಪಿತೂರಿ, ವಂಚನೆ, ಕರ್ತವ್ಯ ಲೋಪ, ಸಾಕ್ಷ್ಯನಾಶ ಸೇರಿದಂತೆ ಕೆಲ ಆರೋಪಗಳಿಗೆ ಸಂಬಂಧಿಸಿದಂತೆ ಕೆಲವು ಅಭ್ಯರ್ಥಿಗಳು, ಸಂಸ್ಥೆಗಳ ಮುಖ್ಯಸ್ಥರು ಮತ್ತು ಮಧ್ಯವರ್ತಿಗಳನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದೆ ಎಂದು ಅದು ಹೇಳಿದೆ.

ನೀಟ್‌-ಯುಜಿ 2024ರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಹಲವು ಬಗೆಯ ಅಕ್ರಮಗಳ ಆರೋಪಗಳು ವ್ಯಕ್ತವಾದ ಬೆನ್ನಲ್ಲೇ, ದೇಶದ ವಿವಿಧ ನಗರಗಳಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸಿದ್ದವು. ಈ ವಿಷಯವಾಗಿ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಎನ್‌ಟಿಎ ಸಮರ್ಪಕವಾಗಿ ಪರೀಕ್ಷಾ ಕಾರ್ಯಗಳನ್ನು ನಿರ್ವಹಿಸಿಲ್ಲ ಎಂಬ ಕೂಗು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವಾಲಯ, ಎನ್‌ಟಿಎ ಪರೀಕ್ಷಾ ಪ್ರಕ್ರಿಯೆಯನ್ನು ಸುಧಾರಿಸಲು ಇಸ್ರೊ ಮಾಜಿ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣನ್‌ ಅವರ ನೇತೃತ್ವದ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿದೆ.

               ಸಾರ್ವಜನಿಕ ಪರೀಕ್ಷೆಯಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಸಂಸತ್ತು 2024ರ ಫೆಬ್ರುವರಿ 12ರಂದು ಸಾರ್ವಜನಿಕ ಪರೀಕ್ಷೆ (ಅಕ್ರಮ ತಡೆ) ಕಾಯ್ದೆ 2024 ಅನ್ನು ತಂದಿದೆ. ಅದು 2024 ಜೂನ್‌ 21ರಿಂದ ಜಾರಿಗೆ ಬಂದಿದ್ದು, ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ಈ ಕಾಯ್ದೆ ಸೂಚಿಸುತ್ತದೆ. ಈ ಸಂಬಂಧ ನಿಯಮಗಳನ್ನು 2024ರ ಜೂನ್‌ 23ರಂದು ಹೊರಡಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ.

ಇದೇ 8ಕ್ಕೆ ವಿಚಾರಣೆ:

               ದೇಶದಾದ್ಯಂತ ಮೇ 5ರಂದು ನಡೆದ 'ನೀಟ್‌-ಯುಜಿ' ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮತ್ತು ಹೊಸದಾಗಿ ಪರೀಕ್ಷೆ ನಡೆಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠ ಇದೇ 8ರಂದು ನಡೆಸಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries