HEALTH TIPS

ಎಂಎಸ್‌ಪಿ, ಸಾಲಮನ್ನಾಕ್ಕಾಗಿ ಮತ್ತೆ ಆಂದೋಲನ: ಸಂಯುಕ್ತ ಕಿಸಾನ್‌ ಮೋರ್ಚಾ ಎಚ್ಚರಿಕೆ

         ವದೆಹಲಿ: ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ, ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರೈತ ಸಂಘಟನೆಗಳ ಒಕ್ಕೂಟ 'ಸಂಯುಕ್ತ ಕಿಸಾನ್‌ ಮೋರ್ಚಾ'ವು (ಎಸ್‌ಕೆಎಂ) ಮತ್ತೆ ಆಂದೋಲನ ನಡೆಸಲು ನಿರ್ಧರಿಸಲಾಗಿದೆ ಎಂದು ಗುರುವಾರ ಘೋಷಿಸಿದೆ.

      ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೆ ಮನವಿ ಪತ್ರ ಸಲ್ಲಿಸಲು ನಿರ್ಧರಿಸಿದೆ.

          2020-21ರಲ್ಲಿ ರೈತ ಹೋರಾಟವನ್ನು ಮುನ್ನಡೆಸಿದ್ದ ಎಸ್‌ಕೆಎಂ, ತನ್ನ ಸರ್ವಸದಸ್ಯರ ಸಭೆ ನಡೆಸಿದ ಮರುದಿನವೇ ಈ ಘೋಷಣೆ ಮಾಡಿದೆ. ಈ ಹಿಂದಿನಂತೆ ಆಂದೋಲನದ ಭಾಗವಾಗಿ ರಾಜಧಾನಿ ದೆಹಲಿಗೆ ಮೆರವಣಿಗೆ ನಡೆಸುವ ಸಾಧ್ಯತೆ ಇಲ್ಲ ಎಂದು ಸುಳಿವು ನೀಡಿದೆ.

           'ವಿವಿಧ ಬೇಡಿಕೆ ಈಡೇರಿಸುವ ಸಂಬಂಧ ಕೇಂದ್ರ ಸರ್ಕಾರದ ಕೃಷಿ ಇಲಾಖೆಯ ಕಾರ್ಯದರ್ಶಿಯು 2021ರ ಡಿಸೆಂಬರ್‌ 9ರಂದು ಎಸ್‌ಕೆಎಂ ಜೊತೆ ಮಾಡಿಕೊಂಡ ಒಪ್ಪಂದವನ್ನು ಜಾರಿಗೊಳಿಸಬೇಕು. ರೈತರ ದೈನಂದಿನ ಜೀವನಕ್ಕೆ ಎದುರಾಗಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂಬುದು ನಮ್ಮ ಬೇಡಿಕೆಯಲ್ಲಿ ಒಳಗೊಂಡಿದೆ' ಎಂದು ಎಸ್‌ಕೆಎಂ ತಿಳಿಸಿದೆ.

             'ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಲೋಕಸಭಾ, ರಾಜ್ಯಸಭಾ ಸದಸ್ಯರಿಗೂ ಬೇಡಿಕೆಗಳ ಮನವಿ ಪತ್ರವನ್ನು ಜುಲೈ 16ರಿಂದ 1‌8ರ ಒಳಗಾಗಿ ಸಲ್ಲಿಸಲು ಸಮಯಾಕಾಶ ಕೋರಿದ್ದೇವೆ' ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

               ಸ್ಮಾರಕ ನಿರ್ಮಿಸಿ, ಪರಿಹಾರ ನೀಡಿ: ದೆಹಲಿಯ ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ 2020-21ರಲ್ಲಿ ನಡೆದ ಆಂದೋಲನದ ವೇಳೆ ಮೃತರಾದ ರೈತರ ಗೌರವಾರ್ಥ ಸ್ಮಾರ‌ಕ ನಿರ್ಮಾಣ, 2021ರಲ್ಲಿ ಉತ್ತರ ಪ್ರದೇಶದ ಲಖೀಂಪುರ ಖೀರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಎಸ್‌ಕೆಎಂ ಒತ್ತಾಯಿಸಿದೆ.

             ದೇಶದಾದ್ಯಂತ ಪ್ರತಿಭಟನೆ: ಈ ಬಾರಿಯೂ ಆಂದೋಲನವು ದೆಹಲಿಗೆ ಮೆರವಣಿಗೆ ತೆರಳಲಿದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಎಸ್‌ಕೆಎಂ ಮುಖಂಡರು, 'ಈ ಬಾರಿ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ವಿಧಾನಸಭಾ ಚುನಾವಣೆ ಹತ್ತಿರದಲ್ಲಿರುವ ಮಹಾರಾಷ್ಟ್ರ, ಜಾರ್ಖಂಡ್‌, ಜಮ್ಮು ಮತ್ತು ಕಾಶ್ಮೀರ, ಹರಿಯಾಣ ರಾಜ್ಯಗಳಲ್ಲಿ ಹೆಚ್ಚಿನ ಆದ್ಯತೆ ನೀಡಿ ಹೋರಾಟ ನಡೆಸಲಾಗುವುದು. ಈ ರಾಜ್ಯಗಳಲ್ಲಿ ಬೇಡಿಕೆ ಸಂಬಂಧ ರೈತರ ಪ್ರತ್ಯೇಕ ಸಭೆ ಕರೆದು, ಬಿಜೆಪಿಯನ್ನು ಚುನಾವಣೆಯಲ್ಲಿ ಶಿಕ್ಷಿಸುವಂತೆ ಮನವಿ ಮಾಡಲಾಗುವುದು' ಎಂದರು.

        'ಪ್ರತಿ ಬಾರಿ ಕೂಡ ಅದೇ ಮಾದರಿಯ ಪ್ರತಿಭಟನೆಯನ್ನು ಬಳಸಬೇಕೆಂದಿಲ್ಲ. ನಾವು ಈ ಸಲ ದೇಶದಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ' ಎಂದು ಸಭೆಯಲ್ಲಿ ಭಾಗವಹಿಸಿದ್ದ ಆಲ್‌ ಇಂಡಿಯಾ ಕಿಶಾನ್‌ ಸಭಾದ ಹನ್ನನ್ ಮುಲ್ಲಾ ತಿಳಿಸಿದರು.

           ಬಿಜೆಪಿಗೆ 159 ಕ್ಷೇತ್ರಗಳಲ್ಲಿ ಹಿನ್ನಡೆ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳ 159 ಗ್ರಾಮೀಣ ಕ್ಷೇತ್ರಗಳಲ್ಲಿ ರೈತರ ಹೋರಾಟದಿಂದಲೇ ಬಿಜೆಪಿ ಸೋಲು ಕಾಣುವಂತಾಯಿತು ಎಂದು ಎಸ್‌ಕೆಎಂ ಮುಖಂಡರು ತಿಳಿಸಿದರು.

         ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಹಾಗೂ ಮಹಾರಾಷ್ಟ್ರದ 38 ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಸೋಲುಂಡಿದೆ. ಕೇಂದ್ರ ಸಚಿವರಾಗಿದ್ದ, ಉತ್ತರಪ್ರದೇಶದ ಲಖೀಂಪುರ ಖೀರಿಯಿಂದ ಸ್ಪರ್ಧಿಸಿದ್ದ ಅಜಯ್‌ ಮಿಶ್ರಾ, ಕುಂತಿ ಕ್ಷೇತ್ರದಿಂದ ಸ್ಪ‍ರ್ಧಿಸಿದ್ದ ಕೃಷಿ ಸಚಿವ ಅರ್ಜುನ್‌ ಮುಂಡಾ ಕೂಡ ರೈತರ ಹೋರಾಟದಿಂದಲೇ ಸೋತಿದ್ದಾರೆ' ಎಂದರು.

          2021ರ ಅಕ್ಟೋಬರ್‌ 3ರಂದು ಲಖೀಂಪುರ ಖೀರಿಯಲ್ಲಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದರು, ಆಗಿನ ಸಂಸದ ಅಜಯ್‌ ಮಿಶ್ರಾ ಮಗ ಆಶೀಶ್‌ ಮಿಶ್ರಾ ಎಸ್‌ಯುವಿ ಹರಿಸಿದ್ದರಿಂದ ನಾಲ್ವರು ರೈತರು ಸೇರಿದಂತೆ 8 ಮಂದಿ ಮೃತಪಟ್ಟಿದ್ದರು.

        ದೇಶದಾದ್ಯಂತ ತಮ್ಮ ಬೇಡಿಕೆಗೆ ಬೆಂಬಲ ಪಡೆಯುವುದಕ್ಕಾಗಿ ಆ.9ರ 'ಕ್ವಿಟ್‌ ಇಂಡಿಯಾ ದಿನ'ದಂದು ‌'ಕಾರ್ಪೋರೇಟ್‌ ಕ್ವಿಟ್‌ ಇಂಡಿಯಾ ದಿನ'ವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ.

ಪ್ರಮುಖ ಬೇಡಿಕೆಗಳೇನು?

  •  ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ

  • ವಿಶ್ವ ವ್ಯಾಪಾರ ಸಂಘಟನೆಯಿಂದ (ಡಬ್ಲ್ಯುಟಿಒ) ಭಾರತ ಹೊರಬರಬೇಕು

  • ಕೃಷಿ ಕ್ಷೇತ್ರಕ್ಕೆ ಬಹುರಾಷ್ಟ್ರೀಯ ಕಂಪನಿಗಳು ಪ್ರವೇಶಿಸುವುದನ್ನು ತಡೆಯಬೇಕು

  • ಇಂಧನ ಕ್ಷೇತ್ರದ ಖಾಸಗೀಕರಣ ಕೈ ಬಿಡಬೇಕು

  • ಪ್ರಿಪೆಯ್ಡ್‌ ಸ್ಮಾರ್ಟ್‌ ಮೀಟರ್‌ ಪ್ರಸ್ತಾಪ ಹಿಂದಕ್ಕೆ ಪಡೆಯಬೇಕು

  • ಆಂದೋಲನದಲ್ಲಿ ಮೃತಪಟ್ಟ ರೈತ ಕುಟುಂಬಗಳಿಗೆ ಪರಿಹಾರ

  • ರೈತರ ಮೇಲೆ ಹಾಕಿದ ಎಲ್ಲ ಪ್ರಕರಣಗಳು ಹಿಂದಕ್ಕೆ ಪಡೆಯಬೇಕು

  • ಎಲ್ಲ ಬೆಳೆಗಳಿಗೂ ಸಮಗ್ರ ವಿಮಾ ರಕ್ಷಣೆ

  • ಕೃಷಿಕರು, ಕೃಷಿ ಕಾರ್ಮಿಕರಿಗೆ ಮಾಸಿಕ ₹10 ಸಾವಿರ ಪಿಂಚಣಿ

  • 2013ರ ಭೂಸ್ವಾಧೀನ ಕಾಯ್ದೆ ಕಟ್ಟುನಿಟ್ಟಾಗಿ ಜಾರಿ

  • ‌ಕೃಷಿ ಕ್ಷೇತ್ರಕ್ಕೆ ಪ್ರತ್ಯೇಕ ಬಜೆಟ್‌ ಮಂಡನೆ

  • ಕೇಂದ್ರದ ಸಹಕಾರಿ ಸಚಿವಾಲಯ ರದ್ದುಗೊಳಿಸಲು ಆಗ್ರಹ

  • ಕೃಷಿ ಉತ್ಪನ್ನಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries