ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆ ಹಾಗೂ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಸಂಭವನೀಯ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಅವರ ಸ್ಪರ್ಧೆಯನ್ನು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಮಿಷೆಲ್ ಒಬಾಮ ದಂಪತಿ ಅನುಮೋದಿಸಿದ್ದಾರೆ ಎಂದು ವರದಿಯಾಗಿದೆ.
'ಈ ವಾರದ ಆರಂಭದಲ್ಲಿ ನಾನು ಮತ್ತು ಮಿಚೆಲ್... ನಮ್ಮ ಸ್ನೇಹಿತೆ ಕಮಲಾ ಹ್ಯಾರಿಸ್‌ಗೆ ದೂರವಾಣಿ ಕರೆ ಮಾಡಿದೆವು. ಅವರು ಅಮೆರಿಕದ ಅದ್ಭುತ ಅಧ್ಯಕ್ಷರಾಗುತ್ತಾರೆ ಎಂದು ನಾವು ಭಾವಿಸಿದ್ದೇವೆ. ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹ್ಯಾರಿಸ್‌ಗೆ ಹೇಳಿದ್ದೇವೆ. ನವೆಂಬರ್‌ನಲ್ಲಿ ನಡೆಯಲಿರುವ.
ಅಧ್ಯಕ್ಷೀಯ ಚುನಾವಣೆಯಲ್ಲಿ ಅವರ ಗೆಲ್ಲುವನ್ನು ಖಚಿತಪಡಿಸಲು ನಾವು ಎಲ್ಲ ರೀತಿಯ ಪ್ರಯತ್ನ ಮಾಡಲಿದ್ದೇವೆ. ಇದು ನಮ್ಮ ದೇಶದ ನಿರ್ಣಾಯಕ ಕ್ಷಣ' ಎಂದು ಹ್ಯಾರಿಸ್ ಜತೆ ಮಾತನಾಡಿರುವ ವಿಡಿಯೊವನ್ನು ಬರಾಕ್ ಒಬಾಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.'ನಿಮ್ಮ ಬಗ್ಗೆ ನಮಗೆ ಬಹಳ ಹೆಮ್ಮೆ ಇದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ನಿಮ್ಮ ಗೆಲುವು ಐತಿಹಾಸಿಕವಾಗಲಿದೆ' ಎಂದು ಒಬಾಮ ಶುಭ ಹಾರೈಸಿದ್ದಾರೆ. ಇದಕ್ಕೆ ಪ್ರತಿಯಾಗಿ ಹ್ಯಾರಿಸ್, ಒಬಾಮ ದಂಪತಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಕಮಲಾ ಅವರು ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಎನಿಸಿಕೊಂಡಿದ್ದಾರೆ.
ಕಮಲಾ ಹ್ಯಾರಿಸ್ ವಿರುದ್ಧ ಟ್ರಂಪ್ ಟೀಕೆ: ಡೆಮಾಕ್ರಟಿಕ್ ಪಕ್ಷದ ಸಂಭವನೀಯ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಅವರು 'ಆಡಳಿತ ನಡೆಸಲು ಅಸಮರ್ಥರು' ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ 78 ವರ್ಷದ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.
'ಬೈಡನ್ ಅವರ ವಿನಾಶಕಾರಿ ನೀತಿಗಳನ್ನು ಕಳೆದ ಮೂರೂವರೆ ವರ್ಷಗಳಿಂದ ಬೆಂಬಲಿಸುತ್ತಾ ಬಂದಿರುವ ಕಮಲಾ ಅವರು ಅತಿರೇಕದ ಎಡಪಂಥೀಯ ವಿಚಾರಧಾರೆ ಹೊಂದಿದ್ದಾರೆ. ಅವರಿಗೆ ಅಧಿಕಾರ ಸಿಕ್ಕರೆ ನಮ್ಮ ದೇಶವನ್ನು ನಾಶ ಮಾಡುತ್ತಾರೆ. ಅದಕ್ಕೆ ಅವಕಾಶ ನೀಡಬಾರದು' ಎಂದು ಕಿಡಿಕಾರಿದ್ದಾರೆ.