ಬದಿಯಡ್ಕ: ಸತ್ಯಶಾಂತ ಪ್ರತಿಷ್ಠಾನ ಪುತ್ತೂರು ವತಿಯಿಂದ ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ ಅವರಿಗೆ ತಲೆಂಗಳ ಶಂಭಟ್ಟ ಪಾರ್ವತಿ ದಂಪತಿಗಳ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಸಮಾರಂಭ ಜು.೨೯ಕ್ಕೆ ಸಂಜೆ ೪.೩೦ಕ್ಕೆ ಎಡನೀರು ಮಠದ ಶ್ರೀ ಭಾರತೀ ಕಲಾ ಸದನದಲ್ಲಿ ಜರುಗಲಿದೆ. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಸಮಾರಂಬದಲ್ಲಿ ಪುತ್ತೂರು ಬೊಳ್ವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದ ಅಧ್ಯಕ್ಷ ಭಾಸ್ಕರ ಭಾರ್ಯ, ಪುತ್ತೂರು ನಗರಸಭಾ ಸದಸ್ಯ ಪಿ.ಜಿ ಜಗನ್ನಿವಾಸರಾವ್, ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವಕ್ತಾರ ಡಾ. ವಿಷ್ಣು ಪ್ರಸಾದ್ ಬರೆಕರೆ, ಜ್ಯೋತಿಷಿ ಕೃಷ್ಣ ಮೂರ್ತಿ ಪುದುಕೋಳಿ ಪಾಲ್ಗೊಳ್ಳುವರು. ಕಾರ್ಯಕ್ರಮದ ಅಂಗವಾಗಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ನಾಟ್ಯ ಗುರುಗಳಾದ ಸಬ್ಬಣಕೋಡಿ ರಾಮಭಟ್ ಅವರ ನಿರ್ದೇಶನದಲ್ಲಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಮಕ್ಕಳಿಂದ 'ರಾಜಾ ದಿಲೀಪ -ಅಗ್ರಪೂಜೆ' ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.