ಮುಂಬೈ: ತನ್ನ ಮಕ್ಕಳಿಗೆ ಬೆಲ್ಟ್‌ನಿಂದ ಹೊಡೆಯುತ್ತಿರುವ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಂಬೈ ಪೊಲೀಸರು, ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಮಕ್ಕಳ ಹಕ್ಕುಗಳ ಆಯೋಗವನ್ನು ಬಾಂಬೆ ಹೈಕೋರ್ಟ್‌ನ ಮಾಜಿ ನ್ಯಾಯಾಮೂರ್ತಿ ಶಾರುಖ್ ಕಥಾವಾಲಾ ಒತ್ತಾಯಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ವೀಡಿಯೋ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿರುವ ಶಾರುಖ್ ಕಥಾವಾಲಾ, ಮಕ್ಕಳನ್ನು ರಕ್ಷಿಸುವ ಅಗತ್ಯವಿದೆ. ಪೋಲೀಸ್ ಮತ್ತು ಹಕ್ಕುಗಳ ಸಂಸ್ಥೆ ಇದಕ್ಕೆ ಸಹಕರಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗೋರೆಗಾಂವ್ (ಪೂರ್ವ) ನಲ್ಲಿರುವ ನಿರ್ಲೋನ್ ಪಾರ್ಸಿ ಪಂಚಾಯತ್ ಸಂಕೀರ್ಣದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ವೀಡಿಯೋವನ್ನು ಮಹಿಳೆಯ ಪತಿ ರೆಕಾರ್ಡ್ ಮಾಡಿದ್ದಾರೆ ಎಂದು ವರದಿಯಾಗಿದೆ. ಮಹಿಳೆ ಬೆಲ್ಟ್‌ನಿಂದ ಮಕ್ಕಳನ್ನು ಹೊಡೆದು ಹೆದರಿಸುತ್ತಿರುವುದನ್ನು ಕಾಣಬಹುದು. ಹೊಡೆತದಿಂದ ಮಕ್ಕಳನ್ನು ರಕ್ಷಿಸಲು ಪತಿ ಏಕೆ ಮಧ್ಯಪ್ರವೇಶಿಸಲಿಲ್ಲ ಎಂಬ ಪ್ರಶ್ನೆಗಳೂ ಉದ್ಭವಿಸುತ್ತವೆ.
ಮಕ್ಕಳು ಭಯಭೀತರಾಗಿದ್ದಾರೆ ಮತ್ತು ರಕ್ಷಿಸುವಂತೆ ಮನವಿ ಮಾಡುತ್ತಿದ್ದಾರೆ. ಆದರೆ, ತಾಯಿ ಅಸಹಾಯಕ ಮಕ್ಕಳನ್ನು ಬೆಲ್ಟ್‌ನಿಂದ ಹೊಡೆದು, ವಿಡಿಯೋ ತೋರಿಸಿದ್ದಾರೆ. ವೀಡಿಯೋ ವೈರಲ್ ಆದ ನಂತರ ಆಕ್ರೋಶಕ್ಕೆ ಕಾರಣವಾಗಿದ್ದು, ವಿಡಿಯೋದಲ್ಲಿ ಮಕ್ಕಳನ್ನು ಬೆಲ್ಟ್‌ನಿಂದ ಥಳಿಸುತ್ತಿರುವುದನ್ನು ನೋಡಿದ ನೆಟಿಜನ್‌ಗಳು ಮಹಿಳೆಯ ವಿರುದ್ಧ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಡಿಸಿಪಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್ ಸೂಚಿಸಿದ್ದಾರೆ. ಪೊಲೀಸರು ಕೂಡ ಕುಟುಂಬವನ್ನು ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.