ನದದೆಹಲಿ: ಟಿಬೆಟನ್ ಧರ್ಮಗುರು ದಲೈಲಾಮ ಅವರು ಬಾಲಕನೊಬ್ಬನಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ನದದೆಹಲಿ: ಟಿಬೆಟನ್ ಧರ್ಮಗುರು ದಲೈಲಾಮ ಅವರು ಬಾಲಕನೊಬ್ಬನಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ದಲೈಲಾಮ ಅವರು ಬಾಲಕನ ತುಟಿ ಚುಂಬಿಸಿ, ತಮ್ಮ ನಾಲಿಗೆ ಚೀಪುವಂತೆ ಹೇಳುವ ವಿಡಿಯೊ ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವಿವಾದಕ್ಕೆ ಕಾರಣವಾಗಿತ್ತು.
ದಲೈಲಾಮ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕೆಂದು ಕೋರಿ 'ಕಾನ್ಫೆಡರೇಷನ್ ಆಫ್ ಎನ್‌ಜಿಒ' ತನ್ನ ಅರ್ಜಿಯಲ್ಲಿ ಮನವಿ ಮಾಡಿತ್ತು.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ಪೀಠವು 'ಘಟನೆಯು ಪೂರ್ವಯೋಜಿತ' ಅಲ್ಲ ಎಂದಿತ್ತಲ್ಲದೆ, ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿತು.
'ನ್ಯಾಯಾಲಯವು ವಿಡಿಯೊವನ್ನು ನೋಡಿದ್ದು, ಆ ಘಟನೆಯು ಸಾರ್ವಜನಿಕ ವೇದಿಕೆಯಲ್ಲಿ ನಡೆದಿದೆ ಎಂಬುದನ್ನು ಕಂಡುಕೊಂಡಿದೆ. ಬಾಲಕನು ಪ್ರತಿವಾದಿ ನಂ.4ನ್ನು (ದಲೈಲಾಮ) ಭೇಟಿಯಾಗಿ ಅಪ್ಪಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದ್ದ ಎಂಬುದನ್ನೂ ನ್ಯಾಯಾಲಯ ಗಮನಿಸಿದೆ' ಎಂದು ಹೈಕೋರ್ಟ್ ತಿಳಿಸಿತು.
'ದಲೈಲಾಮ ಅವರು ತಮಾಷೆ ಮತ್ತು ಹಾಸ್ಯ ಮಾಡುವ ಉದ್ದೇಶದಿಂದ ಬಾಲಕನ ಜತೆ ಆ ರೀತಿ ವರ್ತಿಸಿರುವುದು ವಿಡಿಯೊವನ್ನು ನೋಡುವಾಗ ಸ್ಪಷ್ಟವಾಗುತ್ತದೆ. ಟಿಬೆಟನ್ ಸಂಸ್ಕೃತಿಯ ಹಿನ್ನೆಲೆಯಲ್ಲಿ ಈ ಘಟನೆಯನ್ನು ನೋಡಬೇಕು' ಎಂದಿತು.
'ದಲೈಲಾಮ ಅವರು ಈ ಘಟನೆ ಬಗ್ಗೆ ಈಗಾಗಲೇ ಕ್ಷಮೆಯಾಚಿಸಿದ್ದಾರೆ' ಎಂದು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರನ್ನೊಳಗೊಂಡ ಪೀಠ ಹೇಳಿತು. 'ಯಾರಾದರೂ ತೊಂದರೆ ಅನುಭವಿಸಿದ್ದರೆ ಕಾನೂನು ಹೋರಾಟ ನಡೆಸಬಹುದು' ಎಂದೂ ತಿಳಿಸಿತು.