ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿಗಳಿಗೆ ಮನುಸ್ಮೃತಿಯನ್ನು ಪಾಠ ಮಾಡಬೇಕು ಎಂಬ ಪ್ರಸ್ತಾಪದ ವಿವಾದದ ಬೆನ್ನಲ್ಲೇ 'ಯಾವುದೇ ವಿವಾದಾತ್ಮಕ ವಿಷಯವನ್ನು ಪಠ್ಯದಲ್ಲಿ ಸೇರಿಸುವ ಪ್ರಶ್ನೆಯೇ ಇಲ್ಲ' ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ‍್ರಧಾನ್ ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಹೈದರಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದ ನಿಜವಾದ ಮನೋಭಾವವನ್ನು ಎತ್ತಿಹಿಡಿಯಲು ಸರ್ಕಾರ ಬದ್ಧವಾಗಿದೆ. ಮನುಸ್ಮೃತಿಯನ್ನು ದೆಹಲಿ ವಿಶ್ವವಿದ್ಯಾಲಯದ ಕಾನೂನು ಪಠ್ಯದಲ್ಲಿ ಸೇರಿಸಲಾಗುತ್ತದೆ ಎಂಬ ಕೆಲವು ಮಾಹಿತಿ ಬಂದಿತು. ಕೂಡಲೇ ವಿವಿಯ ಉಪಕುಲಪತಿಗಳಾದ ಯೋಗೇಶ್ ಸಿಂಗ್ ಅವರೊಂದಿಗೆ ಈ ಬಗ್ಗೆ ಮಾತನಾಡಿದೆ.
'ಕೆಲ ಪ್ರಾಧ್ಯಾಪಕರು ನ್ಯಾಯಶಾಸ್ತ್ರ ವಿಷಯದಲ್ಲಿ ಕೆಲ ಬದಲಾವಣೆಗಳನ್ನು ಪ್ರಸ್ತಾಪಿಸಿದರು. ಬಳಿಕ ಮನುಸ್ಮೃತಿಯ ವಿಷಯವನ್ನು ತಿರಸ್ಕರಿಸಲಾಗಿದೆ' ಎಂದು ಯೋಗೇಶ್ ತಿಳಿಸಿದ್ದಾಗಿ ಪ್ರಧಾನ್ ಹೇಳಿದರು.
'ವಿಶ್ವವಿದ್ಯಾಲಯದ ಮಂಡಳಿಯಲ್ಲಿ ಮನುಸ್ಮೃತಿಯ ಕುರಿತು ಯಾವುದೇ ಪ್ರಸ್ತಾವ ಇಲ್ಲ. ಗುರುವಾರವೇ ಆ ವಿಚಾರವನ್ನು ಉಪಕುಲಪತಿಗಳು ತಿರಸ್ಕರಿಸಿದ್ದಾರೆ. ನಾವೆಲ್ಲರೂ ನಮ್ಮ ಸಂವಿಧಾನಕ್ಕೆ ಬದ್ಧರಾಗಿದ್ದೇವೆ' ಎಂದರು.