ಕಾಸರಗೋಡು: ಕೋಟ್ಟಾಯಂ ನಿವಾಸಿಯಾಗಿರುವ ಮಾವುತನ ಜತೆ ಪರಾರಿಯಾಗುವ ಯತ್ನದ ಮಧ್ಯೆ, ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ 18ರ ಹರೆಯದ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಹೆತ್ತವರಿಗೆ ಒಪ್ಪಿಸಿದ್ದಾರೆ.
ಮೇಲ್ಪರಂಬ ಆಸುಪಾಸು ವಾಸಿಸುತ್ತಿರುವ 18ರ ಹರೆಯದ ಯುವತಿಗೆ, ಕೋಟ್ಟಾಯಂ ನಿವಾಸಿ ಯುವಜನೊಂದಿಗೆ ಪ್ರೇಮ ಹೊಂದಿದ್ದು, ಇವರಿಬ್ಬರೂ ಪರಸ್ಪರ ಮಾತಾಡಿಕೊಂಡಂತೆ ಯುವಕ ಮಂಗಳವಾರ ಯುವತಿ ಮನೆ ಬಳಿ ಆಗಮಿಸಿದ್ದಾನೆ. ಸಂಜೆ 5ಕ್ಕೆ ಇವರಿಬ್ಬರೂ ಪರಾರಿಯಾಗಿದ್ದಾರೆ. ಯುವತಿ ನಾಪತ್ತೆಯಾಗಿರುವ ಬಗ್ಗೆ ಮನೆಯವರು ಮೇಲ್ಪರಂಬ ಠಾಣೆಗೆ ನೀಡಿದ ದೂರಿನನ್ವಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಈ ಮಧ್ಯೆ ಯುವತಿ ಮೊಬೈಲ್ ಲೊಕೇಶನ್ ಪತ್ತೆಹಚ್ಚಿದ ಪೊಲೀಸರು ಕಾಸರಗೋಡು ರೈಲ್ವೆ ನಿಲ್ದಾಣ ಆಸುಪಾಸು ಇರುವ ಬಗ್ಗೆ ಮಾಹಿತಿ ಲಭಿಸಿತ್ತು. ತಕ್ಷಣ ರೈಲ್ವೆ ಪೊಲೀಸರಿಗೆ ನೀಡಿದ ಮಾಹಿತಿಯನ್ವಯ ಹುಡುಕಾಟ ನಡೆಸುವ ಮಧ್ಯೆ ಕೋಟ್ಟಾಯಂ ನಿವಾಸಿ ಜತೆ ತಿರುವನಂತಪುರ ರೈಲಿಗೆ ಟಿಕೆಟ್ ಪಡೆದು ಏರಲು ಸಿದ್ಧತೆ ನಡೆಸುತ್ತಿದ್ದಂತೆ ಇಬ್ಬರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇಬ್ಬರನ್ನೂ ಠಾಣೆಗೆ ಕರೆತಂದ ಬಳಿಕ ಯುವತಿಯನ್ನು ಹೆತ್ತವರ ಜತೆ ಕಳುಹಿಸಿಕೊಡಲಾಗಿತ್ತು.