ಕುಂಬಳೆ: ಬಿರುಸಿನ ಮಳೆ ಮುಂದುವರಿದಿರುವಂತೆ ಕಾಸರಗೋಡು ಜಿಲ್ಲೆಯ ವಿವಿದೆಡೆ ಕಡಲ್ಕೊರೆತ ತೀವ್ರಗೊಂಡಿದೆ. ಭಾರೀ ಮಳೆಗೆ ಚಳಿಯಂಗೋಡಿನಲ್ಲಿ ಮನೆಯೊಂದು ಕುಸಿದಿದ್ದು, ಅಡ್ಕತ್ತಬೈಲ್‍ನಲ್ಲಿ ಮರ ಬಿದ್ದು ವಿದ್ಯುತ್ ಕಂಬ ಹಾನಿಗೀಡಾಗಿದೆ.
ಬಿರುಸಿನ ಮಳೆಗೆ ಕುಂಬಳೆ, ಕೊಯಿಪ್ಪಾಡಿ, ಪೆರ್ವಾಡ್, ನಾಂಗಿ, ಕೊಪ್ಪಳ ಮೊದಲಾದ ಪ್ರದೇಶಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಸಮುದ್ರ ತಡೆಗೋಡೆ ಸಮುದ್ರ ಪಾಲಾಗಿದೆ. ಇದರಿಂದ ಸಮುದ್ರ ಕಿನಾರೆಯ ಜನರು ಆತಂಕಿತರಾಗಿದ್ದಾರೆ. ಮೊಗ್ರಾಲ್ ನಾಂಗಿಯಲ್ಲಿ ದಿನಗಳ ಹಿಂದೆ ರಿಸೋರ್ಟ್ ಹಾನಿಗೀಡಾಗಿತ್ತು. ಇನ್ನೊಂದು ರಿಸೋರ್ಟ್ ಯಾವುದೇ ಕ್ಷಣದಲ್ಲಿ ಹಾನಿಗೀಡಾಗುವ ಸಾಧ್ಯತೆಯಿದೆ. 25 ರಷ್ಟು ತೆಂಗಿನ ಮರಗಳು ಸಮುದ್ರ ಪಾಲಾಗಿದೆ.
ಮೊಗ್ರಾಲ್ ಗ್ರಾಮದ ಚಳಿಯಂಗೋಡಿನಲ್ಲಿ ಬಿಫಾತಿಮಾ ಅವರ ಹೆಂಚಿನ ಮನೆ ಕುಸಿದೆ ಬಿದ್ದಿದೆ. ಮನೆಯವರು ಅದೃಷ್ಟವಶಾತ್ ಅಪಾಯವಿಲ್ಲದೆ ಪಾರಾದರು. ಮನೆಯವರನ್ನು ಸಮೀಪದ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಅಡ್ಕತ್ತಬೈಲ್ ಉಮಾ ನರ್ಸಿಂಗ್ ಹೋಂನ ಮುಂಭಾಗ ಮರದ ರೆಂಬೆ ಮುರಿದು ಬಿದ್ದು ವಿದ್ಯುತ್ ತಂತಿ, ಕಂಬ ಹಾನಿಗೀಡಾಗಿದೆ.