ನವದೆಹಲಿ: ಭಾರತದಲ್ಲಿ ಕೋವಿಡ್ ಅವಧಿಯ 2020ನೇ ಸಾಲಿನ ಜೀವಿತಾವಧಿ ಕುರಿತು 'ಸೈನ್ಸ್ ಅಡ್ವಾನ್ಸಸ್' ನಿಯತಕಾಲಿಕದಲ್ಲಿ ಪ್ರಕಟವಾದ ವರದಿಯು 'ಅಸ್ವೀಕಾರಾರ್ಹ ಮತ್ತು ಅಸಮರ್ಥನೀಯ' ಎಂದು ಕೇಂದ್ರ ಗೃಹ ಸಚಿವಾಲಯವು ಅಲ್ಲಗಳೆದಿದೆ.
ನಿಯತಕಾಲಿಕದ ವರದಿಯ ಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಮುನ್ನೆಲೆಗೆ ಬಂದ ಹಿಂದೆಯೇ ಶನಿವಾರ ಸಚಿವಾಲಯವು ಈ ಪ್ರತಿಕ್ರಿಯೆ ನೀಡಿದೆ.
ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ-5 (ಎನ್‌ಎಫ್‌ಎಚ್‌ಎಸ್ -5) ವಿಶ್ಲೇಷಿಸುವಾಗ ಸಾಮಾನ್ಯ ಕ್ರಮವನ್ನೇ ಅನುಸರಿಸಲಾಗಿದೆ ಎಂದು ಲೇಖಕರು ಹೇಳಿಕೊಂಡಿದ್ದರೂ, 'ವಿಶ್ಲೇಷಣಾ ಕ್ರಮದಲ್ಲಿಯೇ ಗಂಭೀರವಾದ ಲೋಪಗಳಿವೆ' ಎಂದು ಸಚಿವಾಲಯ ದೂರಿದೆ.
ಸಚಿವಾಲಯವು ಈ ಕುರಿತ ಹೇಳಿಕೆಯಲ್ಲಿ ಪಟ್ಟಿ ಮಾಡಿರುವ ಅಂಶಗಳು ಹೀಗಿವೆ:
'ಮುಖ್ಯವಾದ ಲೋಪವೆಂದರೆ ಲೇಖಕರು, ಎನ್‌ಎಫ್‌ಎಚ್‌ಎಸ್ ಸಮೀಕ್ಷೆಯ ಉಪವಿಭಾಗದಲ್ಲಿರುವ ಜನವರಿ-ಏಪ್ರಿಲ್ 2021ರ ಕುಟುಂಬಗಳ ಮಾಹಿತಿ ಜೊತೆಗೆ, ಈ ಕುಟುಂಬಗಳಲ್ಲಿ 2020 ಮತ್ತು 2019ರಲ್ಲಿ ಸಂಭವಿಸಿದ ಸಾವಿನ ಪ್ರಕರಣಗಳ ವಿವರ ಹೋಲಿಕೆ ಮಾಡುತ್ತಾರೆ. ಮತ್ತು ಈ ಹೋಲಿಕೆ ಫಲಿತಾಂಶವನ್ನು ಇಡೀ ದೇಶಕ್ಕೆ ಅನ್ವಯ ಮಾಡುತ್ತಾರೆ.
14 ರಾಜ್ಯಗಳ ಕುಟುಂಬಗಳ ಶೇ 23ರಷ್ಟು ಮಾಹಿತಿಯನ್ನಷ್ಟೇ ಈ ವಿಶ್ಲೇಷಣೆಗೆ ಬಳಸಿದೆ. ಇದು, ದೇಶದ ಒಟ್ಟು ಸ್ಥಿತಿಯ ಪ್ರಾತಿನಿಧಿಕವಲ್ಲ.
ಕೋವಿಡ್ ಪರಿಣಾಮ ಉತ್ತುಂಗದಲ್ಲಿದ್ದಾಗಿನ ಮಾಹಿತಿ ಆಯ್ಕೆ ಮಾಡಿ ವಿಶ್ಲೇಷಿಸಲಾಗಿದೆ. ಇದು, ತಾರತಮ್ಯದ ಕ್ರಮ.
'ಸೈನ್ಸ್ ಅಡ್ವಾನ್ಸಸ್' ವರದಿಗೆ ಆಧಾರವಾಗಿ ಭಾರತದ ಮಾದರಿ ನೋಂದಣಿ ವ್ಯವಸ್ಥೆ (ಎಸ್‌ಆರ್‌ಎಸ್) ಅಂಕಿಅಂಶಗಳನ್ನು ಬಳಸಲಾಗಿದೆ ಎಂದೂ ಸಚಿವಾಲಯ ಸ್ಪಷ್ಟಪಡಿಸಿದೆ.
ಎಸ್‌ಆರ್‌ಎಸ್‌ನ ಮಾಹಿತಿಯು 36 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿನ 8,842 ಮಾದರಿ ಘಟಕಗಳ ವ್ಯಾಪ್ತಿಗೆ ಒಳಪಡುವ 24 ಲಕ್ಷ ಕುಟುಂಬಗಳ 84 ಲಕ್ಷ ಜನಸಂಖ್ಯೆಯ ವಿವರಗಳನ್ನಷ್ಟೇ ಒಳಗೊಂಡಿತ್ತು ಎಂದು ಸಚಿವಾಲಯವು ವಿವರಿಸಿದೆ.
ಭಾರತದಂತಹ ಮಧ್ಯಮ ಆದಾಯದ ದೇಶಗಳಲ್ಲಿ ಮರಣ ನೋಂದಣಿ ವ್ಯವಸ್ಥೆಯು ದುರ್ಬಲವಾಗಿದೆ ಎಂದೂ ವಿಶ್ಲೇಷಣೆಯಲ್ಲಿ ಹೇಳಲಾಗಿದೆ. ಇದು ಸತ್ಯಕ್ಕೆ ದೂರವಾದುದು. ಭಾರತದಲ್ಲಿ ನಾಗರಿಕ ನೋಂದಣಿ ವ್ಯವಸ್ಥೆಯು (ಸಿಆರ್‌ಎಸ್) ಹೆಚ್ಚು ದೃಢವಾದುದು ಹಾಗೂ ಸಾವಿನ ಶೇ 99ರಷ್ಟು ಮಾಹಿತಿ ಒಳಗೊಂಡಿದೆ ಎಂದು ಕೇಂದ್ರ ಪ್ರತಿಪಾದಿಸಿದೆ. ನೋಂದಣಿ ಪ್ರಮಾಣ 2015ರಲ್ಲಿ ಶೇ 75ರಷ್ಟಿದ್ದರೆ 2020ರಲ್ಲಿ ಶೇ 99ರಷ್ಟಿತ್ತು ಎಂದು ಗೃಹ ಸಚಿವಾಲಯ ಹೇಳಿದೆ. ಈ ಸಿಆರ್‌ಎಸ್ ಮಾಹಿತಿಯ ಪ್ರಕಾರ ಮರಣ ನೋಂದಣಿ ಸಂಖ್ಯೆಯು 2019ರ ಸಾಲಿಗೆ ಹೋಲಿಸಿದರೆ 2020ರಲ್ಲಿ 4.74 ಲಕ್ಷ ಏರಿದೆ. ಹಾಗೆಯೇ ಈ ಸಂಖ್ಯೆಯು 2018ರಲ್ಲಿ4.86 ಲಕ್ಷವಿದ್ದರೆ 2019ರಲ್ಲಿ 6.90 ಲಕ್ಷಕ್ಕೆ ಏರಿತ್ತು ಎಂದೂ ತಿಳಿಸಿದೆ. ಹಾಗೆಯೇ ಸಿಆರ್‌ಎಸ್‌ನಲ್ಲಿ ದಾಖಲಾದ ಸಾವಿನ ಎಲ್ಲ ಹೆಚ್ಚುವರಿ ಪ್ರಕರಣಗಳಿಗೂ ಕೋವಿಡ್ ಪರಿಸ್ಥಿತಿಯೇ ಕಾರಣ ಎಂದೂ ಹೇಳಲಾಗದು. ಮರಣ ಸಂಖ್ಯೆ ಏರಿಕೆಗೆ ಸಿಆರ್‌ಎಸ್‌ನಲ್ಲಿ ನೋಂದಣಿ ಪ್ರಮಾಣ ಏರಿಕೆಯೂ (2029ರಲ್ಲಿ ಶೇ 92ರಷ್ಟಿತ್ತು) ಕಾರಣ ಎಂದು ಪ್ರತಿಕ್ರಿಯಿಸಿದೆ. ಈ ಹಿನ್ನೆಲೆಯಲ್ಲಿ 'ಸೈನ್ಸ್ ಅಡ್ವಾನ್ಸಸ್' ನಿಯತಕಾಲಿಕದ ವರದಿಯಲ್ಲಿ ಉಲ್ಲೇಖಿಸಿರುವಂತೆ 2020ರಲ್ಲಿ 11.9 ಲಕ್ಷ ಸಾವುಗಳು ಸಂಭವಿಸಿವೆ ಎಂಬ ಮಾಹಿತಿಯು ತಪ್ಪು ಮಾಹಿತಿ ನೀಡುವ ಅಂದಾಜು ಆಗಿದೆ' ಎಂದು ಸಚಿವಾಲಯವು ಹೇಳಿಕೆಯಲ್ಲಿ ಪ್ರತಿಪಾದಿಸಿದೆ.