ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ಸಶಸ್ತ್ರ ಪಡೆಯ ಅಗತ್ಯಗಳನ್ನು ನಿರ್ಲಕ್ಷಿಸಲಾಗಿತ್ತು. ಇದರಿಂದ ಆಮದು ಶಸ್ತ್ರಾಸ್ತ್ರಗಳ ಮೇಲೆ ಅವಲಂಬಿತರಾಗುವಂತೆ ಮಾಡಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ದೇಶವನ್ನು ಸ್ವಾವಲಂಬನೆಯ ಹಾದಿಯತ್ತ ಕೊಂಡೊಯ್ಯುತ್ತಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, 'ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ರಚನಾತ್ಮಕ ಸುಧಾರಣೆಗಳನ್ನು ತರುವ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಭಾರಿ ಪ್ರಗತಿ ಸಾಧಿಸಲಾಗುತ್ತಿದೆ. ಅಲ್ಲದೆ, ರಕ್ಷಣಾ ಸಾಧನಗಳ ಸ್ವದೇಶಿ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದ್ದು, ಅವುಗಳ ರಫ್ತಿಗೆ ಉತ್ತೇಜನ ನೀಡಲಾಗುತ್ತಿದೆ' ಎಂದು ಅವರು ತಿಳಿಸಿದ್ದಾರೆ.
'ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ರಕ್ಷಣಾ ಸಚಿವರು ಗಡಿ ರಸ್ತೆಗಳ ನಿರ್ಮಾಣ ಅಗತ್ಯತೆಯನ್ನು ಪ್ರಶ್ನಿಸುತ್ತಿದ್ದರು. ಆದರೆ, ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ 6,800 ಕಿ.ಮೀಗಿಂತಲೂ ಹೆಚ್ಚಿನ ರಸ್ತೆಗಳನ್ನು ಸೇನಾ ಪಡೆಗಳಿಗಾಗಿ ನಿರ್ಮಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.
'10 ವರ್ಷಗಳ ಹಿಂದೆ ಬುಲೆಟ್ ಫ್ರೂಫ್ ಜಾಕೆಟ್‌ಗಳಿಗಾಗಿ ದೇಶವು ಆಮದಿನ ಮೇಲೆ ಅವಲಂಬಿತವಾಗಿತ್ತು. ಆದರೆ, ಈಗ ಮೋದಿ ಸರ್ಕಾರದ ಆಡಳಿತದ ಅಡಿಯಲ್ಲಿ ದೇಶವು ಸ್ವಾವಲಂಬಿಯಾಗಿದೆ. ಅಲ್ಲದೆ, ದೇಶದಲ್ಲಿನ ಕಂಪನಿಗಳು ಫಿರಂಗಿ ಬಂದೂಕುಗಳನ್ನು ತಯಾರಿಸುತ್ತಿವೆ ಹಾಗೂ ಬೇರೆ ದೇಶಗಳಿಗೆ ರಫ್ತು ಮಾಡುತ್ತಿವೆ. ದೇಶದಲ್ಲಿ ರಕ್ಷಣಾ ಸಾಧನಗಳ ಉತ್ಪಾದನೆಯು ₹1 ಲಕ್ಷ ಕೋಟಿ ದಾಟಿದೆ ಮತ್ತು ದೇಶದಲ್ಲಿ ತಯಾರಿಸಿದ ರಕ್ಷಣಾ ಸಾಧನಗಳನ್ನು 80 ದೇಶಗಳಿಗೆ ರಫ್ತು ಮಾಡಲಾಗುತ್ತಿದೆ' ಎಂದು ವೈಷ್ಣವ್ ತಿಳಿಸಿದ್ದಾರೆ.
'ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಹಗರಣಗಳು ಮಾತ್ರ ನಡೆದಿವೆ. ಆದರೆ, ಬಿಜೆಪಿ ಯಾವಾಗಲೂ ರಾಷ್ಟ್ರ ಮೊದಲು ಎಂಬ ತತ್ವದ ಮೇಲೆ ಕೆಲಸ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣಾ ಕ್ಷೇತ್ರದಲ್ಲಿ ಕೈಗೊಂಡಿರುವ ಸುಧಾರಣೆಗಳು ಇದೀಗ ಫಲಿತಾಂಶವನ್ನು ತೋರಿಸುತ್ತಿವೆ' ಎಂದು ಅವರು ಹೇಳಿದ್ದಾರೆ.