ತಿರುವನಂತಪುರಂ: ಶ್ರೀಪದ್ಮನಾಭ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಚಿಕನ್ ಬಿರಿಯಾನಿ ಸತ್ಕಾರ ನಡೆದಿರುವುದಾಗಿ ತಿಳಿದುಬಂದಿದೆ. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಯಲ್ಲಿ ಮಾಂಸದ ಖಾದ್ಯ ಸತ್ಕಾರ ನಡೆದಿದೆ.
ನೌಕರನ ಮಗನಿಗೆ ನೌಕರಿ ಸಿಕ್ಕಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ನಡೆಸಲಾಯಿತು. ಘಟನೆಯ ದೃಶ್ಯಾವಳಿ ಮಾಧ್ಯಮಗಳಿಗೆ ಲಭಿಸಿದೆ.
ಮಹಾಕ್ಷೇತ್ರದಲ್ಲಿ ನಡೆದ ಅಧಾರ್ಮಿಕ ವಿಧಾನಗಳು ಬೆಳಕಿಗೆ ಬಂದ ನಂತರ ಭಕ್ತರು ತೀವ್ರ ಆಕ್ರೋಶಗೊಂಡಿದ್ದಾರೆ. ಅನಂತಪುರಿ ಹಿಂದೂ ಧರ್ಮ ಪರಿಷತ್ತು ಹಾಗೂ ಶ್ರೀಪದ್ಮನಾಭ ಸ್ವಾಮಿ ಕರ್ಮಚಾರಿ ಸಂಘ ತೀವ್ರ ಪ್ರತಿಭಟನೆಗೆ ಮುಂದಾಗಿದೆ. ದೇವಸ್ಥಾನದ ಆವರಣದಲ್ಲಿ ಮಾಂಸಾಹಾರ ಸೇವನೆ ಮಾಡುವುದು ದೇವಸ್ಥಾನದ ಸಂಪ್ರದಾಯ ಮತ್ತು ಪೌರಾಣಿಕ ದಾಖಲೆಗಳ ಉಲ್ಲಂಘನೆಯಾಗಿದೆ ಎಂದು ಸಂಘಟನೆಯ ಪದಾಧಿಕಾರಿಗಳು ಗಮನ ಸೆಳೆದರು. ಕಠಿಣ ಕ್ರಮಕ್ಕೆ ಆಗ್ರಹಿಸಿ ಸಂಘ ಸಂಸ್ಥೆಗಳು ದೇವಸ್ಥಾನದ ಟ್ರಸ್ಟ್‍ಗೆ ದೂರು ಸಲ್ಲಿಸಿವೆ.
ಕಳೆದ ಕೆಲವು ವರ್ಷಗಳಿಂದ ಕಾರ್ಯನಿರ್ವಹಣಾಧಿಕಾರಿಗಳ ಕ್ರಮದಿಂದ ದೇವಸ್ಥಾನದ ಪಾವಿತ್ರ್ಯತೆ ಹಾಳಾಗಿದೆ ಎಂದು ಪದಾಧಿಕಾರಿಗಳು ಹೇಳಿದರು. ದೇವಾಲಯ ಮತ್ತು ಅರಮನೆಯು ಭಕ್ತಿಪುರಸ್ಸರಗಳೊಂದಿಗೆ ಆಶೀರ್ವಾದದ ಸ್ಥಳವಾಗಿದೆ. ಆದರೆ ಇಲ್ಲಿ ನಡೆಯುತ್ತಿರುವುದು ನಂಬಿಕೆಗಳ ಉಲ್ಲಂಘನೆಯಾಗಿದೆ. ನಿರಂಕುಶಾಧಿಕಾರಿಯಂತೆ ವರ್ತಿಸುವ ಕಾರ್ಯನಿರ್ವಹಣಾಧಿಕಾರಿಯನ್ನು ಬದಲಾಯಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ಅನಂತಪುರಿ ಹಿಂದೂ ಧರ್ಮ ಪರಿಷತ್ತು ಹಾಗೂ ಶ್ರೀಪದ್ಮನಾಭ ಸ್ವಾಮಿ ಕರ್ಮಚಾರಿ ಸಂಘದವರು ದೇವಸ್ಥಾನದ ತಂತ್ರಿಗಳ ಸೂಚನೆಯಂತೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.