ಕಾಸರಗೋಡು: ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಾಯಮರ್‌ಮೂಲೆ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳ ಎರಡು ತಂಡಗಳು ಪರಸ್ಪರ ಹೊಡೆದಾಡಿಕೊಂಡಿದ್ದು, ಕೆಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಸಲಾಕೆ ಹಿಡಿದು ಜೀವಾಪಾಯ ತಂದೊಡ್ಡುವ ರೀತಿಯಲ್ಲಿ ವಿದ್ಯಾರ್ಥಿ ಗುಂಪು ವಿದ್ಯಾನಗರ ಬಿ.ಸಿ ರೋಡ್ ಮುಖ್ಯರಸ್ತೆಯಲ್ಲೇ ಬಡಿದಾಡಿಕೊಂಡ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೂ ಅಡಚಣೆಯುಂಟಾಗಿತ್ತು. ಪ್ರಕರಣಕ್ಕೆ ಸಂಬAಧಿಸಿ ಏಳು ಮಂದಿ ವಿದ್ಯಾರ್ಥಿಗಳನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದೆ. ಸ್ಥಳೀಯರು ವಿದ್ಯಾರ್ಥಿಗಳ ನಡುವಿನ ಹೊಡೆದಾಟ ಬಿಡಿಸಲು ಪ್ರಯತ್ನಿಸಿದರೂ, ಫಲಕಾರಿಯಾಗದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆ ವಿದ್ಯಾರ್ಥಿಗಳು ಪರಾರಿಯಾಗಿದ್ದಾರೆ. ಕೆವು ವಿದ್ಯಾರ್ಥಿಗಳ ಮುಖ, ತಲೆಗೆ ಗಾಯಗಳುಟಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಹೊಡೆದಾಟದಲ್ಲಿ ನಿರತರಾಗಿದ್ದ ಎರಡೂ ತಂಡಗಳ ಏಳು ಮಂದಿ ವಿದ್ಯಾರ್ಥಿಗಳನ್ನು ಶಾಲಾ ಪ್ರಾಂಶುಪಾಲರು ಅಮಾನತುಗೊಳಿಸಿದ್ದಾರೆ. ತಕ್ಷಣ ಪಿಟಿಎ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಶಾಲಾ ಪ್ರಾಂಶುಪಾಲರು ತಿಳಿಸಿದ್ದಾರೆ.