ಪೋರ್ಟ್ ಲೂಯಿಸ್: ಮಾರಿಷಸ್‌ನಲ್ಲಿ ಭಾರತದ ಮೊದಲ ಸಾಗರೋತ್ತರ ಜನೌಷಧಿ ಕೇಂದ್ರವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಉದ್ಘಾಟಿಸಿದರು.
ಇದು ಉಭಯ ದೇಶಗಳ ನಡುವಿನ ನಿಕಟ ಸಹಕಾರಕ್ಕೆ (ವಿಶೇಷವಾಗಿ ಆರೋಗ್ಯದ ಕ್ಷೇತ್ರ) ಸಾಕ್ಷಿಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
'ಎಲ್ಲರಿಗೂ ಕೈಗೆಟಕುವ ದರದಲ್ಲಿ ಜೆನೆರಿಕ್ ಔಷಧಿಗಳು ಲಭ್ಯವಾಗುವಂತೆ ಮಾಡುವುದು ಜನೌಷಧಿ ಕೇಂದ್ರಗಳ ಸ್ಥಾಪನೆಯ ಉದ್ದೇಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಭರವಸೆಯಂತೆ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ' ಎಂದು ಜೈಶಂಕರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತ-ಮಾರಿಷಸ್ ನಡುವಿನ ಈ ಆರೋಗ್ಯ ಪಾಲುದಾರಿಕೆ ಯೋಜನೆಯು ಸಾರ್ವಜನಿಕರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವ ಜೊತೆಗೆ ಕೈಗೆಟುಕುವ ದರದಲ್ಲಿ ಭಾರತದಲ್ಲಿ ತಯಾರಿಸಿದ ಔಷಧಿಗಳನ್ನು ಪೂರೈಸುತ್ತದೆ ಎಂದು ಅವರು ಹೇಳಿದ್ದಾರೆ.
ಇದಲ್ಲದೇ ಜೈಶಂಕರ್ ಅವರು ಪ್ರಧಾನಿ ಜುಗ್ನಾಥ್ ಅವರೊಂದಿಗೆ ಗ್ರಾಂಡ್ ಬೋಯಿಸ್‌ನಲ್ಲಿ ಭಾರತದ ಅನುದಾನದದ ನೆರವಿನಿಂದ ನಿರ್ಮಿಸಲಾದ ಆತ್ಯಾಧುನಿಕ ಮೆಡಿಕ್ಲಿನಿಕ್ ಯೋಜನೆಯನ್ನು ಉದ್ಘಾಟಿಸಿದರು. ಈ ಮೆಡಿಕ್ಲಿನಿಕ್ ಅನ್ನು ನಮ್ಮ ಸ್ನೇಹದ ಹೊಸ ಅಭಿವ್ಯಕ್ತಿ ಎಂದು ಜೈಶಂಕರ್ ಬಣ್ಣಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತ-ಮಾರಿಷಸ್ ಸಂಬಂಧವನ್ನು 'ಖೂನ್ ಕಾ ರಿಶ್ತಾ' (ರಕ್ತ ಸಂಬಂಧ) ಎಂದು ಸರಿಯಾಗಿಯೇ ಹೇಳಿದ್ದಾರೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
16,000 ಕ್ಕೂ ಹೆಚ್ಚು ನಿವಾಸಿಗಳಿಗೆ ಆರೋಗ್ಯ ಸೇವೆಗಳನ್ನು ಒದಗಿಸುವ ಈ ಯೋಜನೆಯ ಪೂರ್ಣಗೊಂಡಿರುವುದು ಸಂತಸದ ವಿಷಯ ಎಂದು ಜೈಶಂಕರ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಭಾರತದ ನೆರವಿನ, 12 ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಇದೇ ವೇಳೆ ವರ್ಚುವಲ್ ಆಗಿ ಉದ್ಘಾಟಿಸಲಾಯಿತು.