ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಅತ್ಯಾಧುನಿಕ ಗೂಢಚರ್ಯೆ ತಂತ್ರಾಂಶವಾದ 'ಮರ್ಸಿನರಿ ಸ್ಪೈವೇರ್' ಮೂಲಕ ನನ್ನ ಫೋನ್ ಅನ್ನು ಗುರಿಯಾಸಿಕೊಂಡಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಶನಿವಾರ ಆರೋಪಿಸಿದ್ದಾರೆ.
'ಇದು ಅಸಾಂವಿಧಾನಿಕ ಕೃತ್ಯವಾಗಿದ್ದು, ಖಾಸಗಿತನದ ಉಲ್ಲಂಘನೆಯಾಗಿದೆ.
'ಗೂಢಚರ್ಯೆ ತಂತ್ರಾಂಶವು ನಿಮ್ಮ ಆಯಪಲ್ ಐಫೋನ್ ಅನ್ನು ಗುರಿಯಾಗಿಸಿಕೊಂಡಿದ್ದು, ಅದನ್ನು ನಿಯಂತ್ರಿಸಲು ಯತ್ನಿಸುತ್ತಿದೆ' ಎಂದು 'ಆಯಪಲ್' ಕಂಪನಿಯಿಂದ ಬಂದ ಸಂದೇಶದ 'ಸ್ಕ್ರೀನ್‌ಶಾಟ್' ಅನ್ನು ವೇಣುಗೋಪಾಲ್ ಅವರು 'ಎಕ್ಸ್'ನಲ್ಲಿ ಹಂಚಿಕೊಂಡಿದ್ದಾರೆ.
'ನಿಮ್ಮ ನೆಚ್ಚಿನ ಕುತಂತ್ರಾಂಶವನ್ನು ನನ್ನ ಫೋನ್‌ಗೆ ಕಳುಹಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು. ನಿಮ್ಮ ಈ ವಿಶೇಷ ಉಡುಗೊರೆಯ ಬಗ್ಗೆ 'ಆಯಪಲ್' ನನಗೆ ಮಾಹಿತಿ ನೀಡಿದೆ' ಎಂದು ಅವರು ಪೋಸ್ಟ್‌ನಲ್ಲಿ ಹೇಳಿದ್ದಾರೆ.
'ಮೋದಿ ಸರ್ಕಾರವು ಕ್ರಿಮಿನಲ್ ಮತ್ತು ಅಸಾಂವಿಧಾನಿಕ ರೀತಿಯಲ್ಲಿ ವರ್ತಿಸುತ್ತಿದೆ. ರಾಜಕೀಯ ವಿರೋಧಿಗಳ ಮೇಲೆ ನಿಗಾ ಇಟ್ಟಿದ್ದು, ಅವರ ಖಾಸಗಿತನವನ್ನು ಅತಿಕ್ರಮಿಸುತ್ತಿದೆ' ಎಂದು ಅವರು ದೂರಿದ್ದಾರೆ.
'ಈ ಹಿಂದೆ 2023ರ ಅಕ್ಟೋಬರ್ 30ರಂದು ನಿಮಗೆ ಇದೇ ರೀತಿಯ ಸಂದೇಶ ಕಳುಹಿಸಲಾಗಿತ್ತು. ಆದರೆ ಇದು ಪುನರಾವರ್ತಿತ ಸೂಚನೆ ಅಲ್ಲ. ನಿಮ್ಮ ಮೊಬೈಲ್ ವಿರುದ್ಧ ಮತ್ತೊಂದು ದಾಳಿ ಆಗಿರುವುದನ್ನು ಪತ್ತೆ ಹಚ್ಚಲಾಗಿದೆ. ಇದನ್ನು ನೀವು ಗಂಭೀರವಾಗಿ ತೆಗೆದುಕೊಳ್ಳಿ' ಎಂದು 'ಆಯಪಲ್' ಕಂಪನಿ ವೇಣುಗೋಪಾಲ್ ಅವರಿಗೆ ಸಂದೇಶ ಕಳುಹಿಸಿದೆ.
ಇಸ್ರೇಲ್ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ಕುತಂತ್ರಾಂಶ ಹಾಗೂ ಅತ್ಯಾಧುನಿಕ ಗೂಢಚರ್ಯೆ ತಂತ್ರಾಂಶದ (ಸ್ಪೈವೇರ್) ದಾಳಿ ಬಗ್ಗೆ ತನ್ನ ಆಯ್ದ ಬಳಕೆದಾರರ ಇ-ಮೇಲ್‌ಗಳಿಗೆ, ಐಫೋನ್ ತಯಾರಿಕಾ ಕಂಪನಿಯಾದ ಆಯಪಲ್ ಎಚ್ಚರಿಕೆಯ ಸಂದೇಶವನ್ನು ಏಪ್ರಿಲ್‌ನಲ್ಲಿ ಕಳುಹಿಸಿತ್ತು.
ಭಾರತ ಸೇರಿ ವಿಶ್ವದ 91 ರಾಷ್ಟ್ರಗಳಲ್ಲಿರುವ ತನ್ನ ಬಳಕೆದಾರರಿಗೆ ಈ ಸಂದೇಶ ರವಾನಿಸಿತ್ತು. ಪತ್ರಕರ್ತರು, ಸಾಮಾಜಿಕ ಹೋರಾಟಗಾರರು, ರಾಜಕಾರಣಿಗಳು ಹಾಗೂ ರಾಯಭಾರಿಗಳು ಈ ತಂತ್ರಾಂಶದ ದಾಳಿಗೆ ಸಿಲುಕಿದ್ದಾರೆ ಎಂದು ಹೇಳಿತ್ತು.
ಕಂಪನಿಯು ಈ ಹಿಂದೆಯೂ ಇಂತಹ ದಾಳಿ ಬಗ್ಗೆ ಸಂಶೋಧನೆ ನಡೆಸಿತ್ತು. ಇದರ ಆಧಾರದ ಮೇಲೆ ಸರ್ಕಾರ ಅಥವಾ ಸರ್ಕಾರಿ ಪ್ರಾಯೋಜಿತ ಸಂಸ್ಥೆಗಳು ಈ ದಾಳಿಯ ಹಿಂದೆ ಇರಬಹುದು ಎಂದು ಸಂದೇಶದಲ್ಲಿ ಹೇಳಿತ್ತು. ಆದರೆ, ಯಾರ ಹೆಸರನ್ನೂ ಬಹಿರಂಗಪಡಿಸಿಲ್ಲ. 'ಕೆಲವು ಬಳಕೆದಾರರು ಪೆಗಾಸಸ್ ಕುತಂತ್ರಾಂಶ ಹಾಗೂ ಮರ್ಸಿನರಿ ಸ್ಪೈವೇರ್ ದಾಳಿಗೆ ಒಳಗಾಗಿರಬಹುದಾಗಿದೆ. ಈ ದಾಳಿಯು ಸೈಬರ್ ಅಪರಾಧ ಚಟುವಟಿಕೆ ಹಾಗೂ ಕುತಂತ್ರಾಂಶಕ್ಕಿಂತಲೂ ಹೆಚ್ಚು ಸಂಕೀರ್ಣವಾದುದು. ಈ ಸ್ಕೈವೇರ್ ನಿರ್ದಿಷ್ಟ ವ್ಯಕ್ತಿಗಳ ಐಫೋನ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಿದೆ. ಉಳಿದ ಬಳಕೆದಾರರಿಗೆ ಇದರಿಂದ ತೊಂದರೆ ಇಲ್ಲ' ಎಂದು ತಿಳಿಸಿತ್ತು.